ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯಲ್ಲಿ 370 ನೇ ವಿಧಿ ದೊಡ್ಡ ಅಡ್ಡಿಯಾಗಿತ್ತು ಮತ್ತು ಅದರ ರದ್ದತಿಯು ಕೇಂದ್ರದೊಂದಿಗೆ ಜಮ್ಮು-ಕಾಶ್ಮೀರದ ಸಂಪೂರ್ಣ ಏಕೀಕರಣವನ್ನು ಖಚಿತಪಡಿಸಿದೆ ಮತ್ತು ಈ ಪ್ರದೇಶದಲ್ಲಿ ಅಭೂತಪೂರ್ವ ಅಭಿವೃದ್ಧಿಯನ್ನು ಖಚಿತಪಡಿಸಿದೆ. ಈ ಮೂಲಕ ಶ್ಯಾಮಾ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ಪ್ರೇಮ್ ನಾಥ್ ಡೋಗ್ರಾ ಕನಸು ಈಡೇರಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಹೇಳಿದ್ದಾರೆ.
ಇಂದು ತ್ರಿಕೂಟ ನಗರ ಪ್ರದೇಶದಲ್ಲಿ ಬಿಜೆಪಿ ವಿಚಾರವಾದಿ ಮತ್ತು ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಜಮ್ಮುವಿನ ಭಗವತಿ ನಗರ ಪ್ರದೇಶದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವರು, ಕಳೆದ ಒಂಬತ್ತು ವರ್ಷಗಳಲ್ಲಿ ಭಯೋತ್ಪಾದಕ ಕೃತ್ಯಗಳು ಶೇಕಡಾ 70 ರಷ್ಟು ಕಡಿಮೆಯಾಗಿದೆ. ಧರಣಿ, ಕಲ್ಲು ತೂರಾಟದ ಘಟನೆಗಳು ನಡೆಯುತ್ತಿಲ್ಲ, ಯುವಕರು ಕೈಯಲ್ಲಿ ಲ್ಯಾಪ್ ಟಾಪ್ ಹಿಡಿದುಕೊಂಡು ತಮ್ಮ ಭವಿಷ್ಯ ಕಟ್ಟಿಕೊಳ್ಳುತ್ತಿದ್ದಾರೆ. 28000 ಯುವಕರಿಗೆ ಸರ್ಕಾರಿ ಉದ್ಯೋಗಗಳನ್ನು ಒದಗಿಸಲಾಗಿದೆ ಮತ್ತು 51,000 ಸರ್ಕಾರಿ ಪ್ರಾಯೋಜಿತ ಸ್ವಯಂ ಉದ್ಯೋಗ ಘಟಕಗಳ ಮೂಲಕ 70,000 ಕ್ಕೂ ಹೆಚ್ಚು ಯುವಕರು ತಮ್ಮ ಜೀವನೋಪಾಯವನ್ನು ಗಳಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಕೈಗಾರಿಕೆಗಳಿಗೆ ನೀಡಲಾದ 28,400 ಕೋಟಿ ರೂಪಾಯಿಗಳ ಕೈಗಾರಿಕಾ ಪ್ಯಾಕೇಜ್ ಮತ್ತು ಪ್ರವಾಸೋದ್ಯಮ, ಕರಕುಶಲ ಮತ್ತು ಇತರ ಕ್ಷೇತ್ರಗಳಲ್ಲಿ ಹೊಸ ನೀತಿಗಳ ಅನುಷ್ಠಾನವು ಈ ಪ್ರದೇಶದಲ್ಲಿ ಭಾರಿ ಹೂಡಿಕೆಗೆ ಕಾರಣವಾಗಿದೆ ಎಂದು ಗೃಹ ಸಚಿವರು ಹೇಳಿದರು. ಜಮ್ಮು-ಕಾಶ್ಮೀರ ಪ್ರವಾಸೋದ್ಯಮದಲ್ಲಿ ಉತ್ಕರ್ಷವನ್ನು ಕಾಣುತ್ತಿದೆ ಮತ್ತು ಕಳೆದ ವರ್ಷ ಒಂದು ಕೋಟಿ 88 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಅವರು ಹೇಳಿದರು.