ಹಳಿಯಾಳ: ಕಡಿಮೆ ಮಾನವ ದಿನ ಸೃಜನೆಯಾಗುವ ಕೆಸರೊಳ್ಳಿ ಗ್ರಾಮ ಪಂಚಾಯತಿಯಲ್ಲಿ ಹಾಗೂ ನೀರಲಗಾ ಮತ್ತು ವಾಡ ಅಮೃತ ಸರೋವರ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ರೋಜಗಾರ ದಿನಾಚರಣೆ ಹಾಗೂ ಮಾಹಿತಿ ವಿನಿಮಯ ಕಾರ್ಯಕ್ರಮವನ್ನು ಕೈಗೊಂಡು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನರೇಗಾ ಕೂಲಿಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸಿ ಸಾರ್ವಜನಿಕರಿಗೆ ಕೆಲಸಕ್ಕೆ ಬರುವಂತೆ ಪ್ರೇರೇಪಿಸಲಾಯಿತು.
ತಾಲೂಕ ಐಇಸಿ ಸಂಯೋಜಕರು ಮಾತನಾಡಿ, ಗ್ರಾಮೀಣ ಜನರು ಗುಳೆ ಹೋಗುವುದನ್ನು ತಡೆಗಟ್ಟಲು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಆಸ್ತಿ ಸೃಜನೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಕೆಲಸ ನೀಡುವ ಮೂಲಕ ತಮ್ಮ ಸ್ವಂತ ಗ್ರಾಮಗಳಲ್ಲಿ ಜನರಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ. ಏಪ್ರಿಲ್ 1 ರಿಂದ ಕೂಲಿಯನ್ನು 316 ರೂಗಳಿಗೆ ಹೆಚ್ಚಿಸಲಾಗಿದೆ. ಸಾರ್ವಜನಿಕರು ಕೆಲಸಕ್ಕೆ ಹೋಗುವ ಮೂಲಕ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.
ಯೋಜನೆಯಲ್ಲಿ ಕೇವಲ ಕೆಲಸಕ್ಕೆ ಅಷ್ಟೇ ಮಹತ್ವ ನೀಡದೇ ಕಳೆದ ಒಂದು ತಿಂಗಳಿನಿ0ದ ಆರೋಗ್ಯ ಅಮೃತ ಅಭಿಯನದ ಸಹಯೋಗದಡಿ ನರೇಗಾ ಕೂಲಿಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡು ಗ್ರಾಮೀಣ ಜನರ ಆರೋಗ್ಯಕ್ಕೆ ಒತ್ತು ನೀಡಲಾಗುತ್ತಿದೆ. ಉತ್ತಮ ಆರೋಗ್ಯ ಪ್ರತಿಯೊಬ್ಬರಿಗೂ ಅವಶ್ಯಕವಾದ ಅಂಶವಾಗಿರುವುದರಿoದ ಅದರ ಲಾಭ ಪಡೆದುಕೊಳ್ಳಬೇಕು. ಹಾಗೂ ನರೇಗಾ ಮಾಹಿತಿಯುಳ್ಳ ಕರಪತ್ರಗಳನ್ನು ನೀಡಿ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಂಡು ಅದನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕರಾದ ಎಂ ಕುಮಾರ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಗಾಂಧಿ ಯಲ್ಲಾರಿ ಗೌಡ ನರೇಗಾ ಅಭಿಯಂತರರಾದ ಸಚಿನ, ಗ್ರಾಮ ಪಂಚಾಯತಿ ಸಿಬ್ಬಂದಿ, ನರೇಗಾ ಕೂಲಿಕಾರ್ಮಿಕರು ಹಾಗೂ ಸಾರ್ವಜನಿಕರು ಹಾಜರಿದ್ದರು.