ಅಂಕೋಲಾ: ಮಂಜಗುಣಿ-ಗಂಗಾವಳಿ ನಡುವಿನ ಸೇತುವೆ ಕಾಮಗಾರಿ ಸ್ಥಳಕ್ಕೆ ಶಾಸಕ ಸತೀಶ ಸೈಲ್ ಭಾನುವಾರ ಆಗಮಿಸಿ ಪರಿಶೀಲನೆ ನಡೆಸಿದರು. ಕಳೆದ 5 ವರ್ಷಗಳ ಹಿಂದೆ ಸತೀಶ ಸೈಲ್ ಅವರೇ ಶಾಸಕರಿದ್ದ ಸಂದರ್ಭದಲ್ಲಿ ಈ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿತ್ತು. ನಂತರ ಐದು ವರ್ಷ ಕಳೆದರು ಕೂಡ ಕಾಮಗಾರಿ ಮುಗಿಯದ ಹಿನ್ನೆಲೆಯಲ್ಲಿ ಭಾನುವಾರ ಸ್ಥಳ ಪರಿಶೀಲನೆ ಮಾಡಿದರು.
ಸ್ಥಳೀಯ ಪ್ರಮುಖರಾದ ಶ್ರೀಪಾದ ಟಿ.ನಾಯ್ಕ ಮಾತನಾಡಿ, ಕಳೆದ ಐದು ವರ್ಷಳಿಂದ ಕಾಮಗಾರಿ ನಡೆಯುತ್ತಿದ್ದರು ಇನ್ನುವರೆಗೂ ಮುಗಿದಿಲ್ಲ. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಆದಷ್ಟು ಬೇಗ ಸೇತುವೆ ಕಾಮಗಾರಿ ಮುಗಿಯುವಂತೆ ನೋಡಿಕೊಳ್ಳಬೇಕು. ಇನ್ನು ಶಾಲೆಗೆ ತೆರಳುವ ರಸ್ತೆಯನ್ನು ಸರಿಪಡಿಸದೇ ಇರುವುದರಿಂದ ಮಳೆ ಬಿದ್ದಾಗ ವಿದ್ಯಾರ್ಥಿಗಳಿಗೆ ಸಂಚರಿಸಲು ತೊಂದರೆ ಉಂಟಾಗುತ್ತದೆ ಎಂದು ಸಮಸ್ಯೆಗಳನ್ನು ವಿವರಿಸಿದರು.
ಶಾಸಕ ಸತೀಶ ಸೈಲ್ ಮಾತನಾಡಿ, ಈ ಹಿಂದೆಯೇ ಮುಗಿಯಬೇಕಿದ್ದ ಕಾಮಗಾರಿ ತಡವಾಗಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಆದಷ್ಟು ಶೀಘ್ರ ಮುಗಿಯುವಂತೆ ನೋಡಿಕೊಳ್ಳಲಾಗುವುದು. ಇನ್ನು ವಿದ್ಯುತ್ ಕಂಬ ಹಿಂದಕ್ಕೆ ಹಾಕಿ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಮೂರು ದಿನಗಳೊಗಾಗಿ ರಸ್ತೆ ಸರಿಪಡಿಸಬೇಕು ಎಂದು ಗುತ್ತಿಗೆ ಪಡೆದ ಕಂಪನಿಯ ಮೇಲ್ವಿಚಾರಕ ಬೊಮ್ಮಯ್ಯ ನಾಯಕ ಅವರಿಗೆ ಸೂಚಿಸಿದರು.
ಈ ಸೇತುವೆ ನಿರ್ಮಾಣಕ್ಕೆಂದು ಹಾಕಲಾಗಿದ್ದ ಮಣ್ಣನ್ನು ನದಿಯಿಂದ ಪೂರ್ಣ ಪ್ರಮಾಣದಲ್ಲಿ ತೆಗೆಯದೇ ಇರುವುದರಿಂದ ಸತತ ಮೂರು ಬಾರಿ ನೆರೆ ಉಂಟಾಗಲು ಕಾರಣವಾಯಿತು. ಹೀಗಾಗಿ ಬಾರ್ಜ್ ಮೂಲಕ ಮಣ್ಣನ್ನು ತೆರವುಗೊಳಿಸಿ ನೀರು ಸರಾಗವಾಗಿ ಸಮುದ್ರಕ್ಕೆ ಸೇರುವಂತೆ ಮಾಡಬೇಕು ಎಂದು ಗ್ರಾ.ಪಂ.ಸದಸ್ಯ ವೆಂಕಟರಮಣ ಕೆ.ನಾಯ್ಕ ಹಾಗೂ ಪ್ರಶಾಂತ ವಿ.ನಾಯ್ಕ ಶಾಸಕರಲ್ಲಿ ವಿನಂತಿಸಿಕೊಂಡರು.
ನಂತರ ಸತೀಶ ಸೈಲ್ ಮಾತನಾಡಿ, ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಇಲ್ಲಿಯ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು. ತಕ್ಷಣ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ರಸ್ತೆ ಸರಿಪಡಿಸುವುದು ಮತ್ತು ಆದಷ್ಟು ಶೀಘ್ರ ಕಾಮಗಾರಿ ಮುಗಿಸುವ ಬಗ್ಗೆ ಕ್ರಮಕೈಗೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಪಾಂಡುರಂಗ ಗೌಡ, ಜಯಂತ ನಾಯ್ಕ, ವೆಂಕಟರಮಣ ವಿ. ನಾಯ್ಕ, ಅನಿಲ ಜಾನು ನಾಯ್ಕ, ಕೆ.ಡಿ.ನಾಯ್ಕ, ರವಿ ನಾಯ್ಕ, ಬೊಮ್ಮಯ್ಯ ಎನ್.ನಾಯ್ಕ, ಲೀಲಾವತಿ ನಾಯ್ಕ ಹಾಗೂ ಜಿ.ಎಂ.ಶೆಟ್ಟಿ, ಶಂಭು ಶೆಟ್ಟಿ, ವಿನೋದ ನಾಯಕ, ರಾಮಚಂದ್ರ ನಾಯ್ಕ, ಗೋಪು ನಾಯಕ, ಬಿ.ಡಿ.ನಾಯ್ಕ, ಸುರೇಶ ನಾಯ್ಕ ಅಸಲಗದ್ದೆ, ಜಯಪ್ರಕಾಶ ನಾಯ್ಕ, ಪುರುಷೋತ್ತಮ ನಾಯ್ಕ ಸೇರಿದಂತೆ ಇತರರಿದ್ದರು.