ಸಿದ್ದಾಪುರ: ತಾಲೂಕಿನ ತಟ್ಟಿಕೈ’ಯಲ್ಲಿರುವ ಸರಕುಳಿ ಶಿಕ್ಷಣ ಸಮಿತಿ ನಡೆಸುತ್ತಿರುವ ಶ್ರೀ ಜಗದಂಬಾ ಪ್ರೌಢಶಾಲೆಯ 66ನೇ ಸಂಸ್ಥಾಪನಾ ದಿನಾಚರಣೆಯನ್ನು ಜೂ.19, ಸೋಮವಾರದಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ RDS ವತಿಯಿಂದ 8ನೇ ತರಗತಿ ಮಕ್ಕಳಿಗೆ ಉಚಿತ ಬ್ಯಾಗ್ ಮತ್ತು ಸಮವಸ್ತ್ರವನ್ನು ನೀಡಲಾಯಿತು. ಅಲ್ಲದೇ, ಏಪ್ರಿಲ್ 2023ರ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 90%ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಪ್ರೌಢಶಾಲೆಯ ಮುಖ್ಯಾಧ್ಯಾಪಕ ಕೃಷ್ಣಮೂರ್ತಿ ಎಚ್. ಎಸ್., ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮಾಧ್ಯಮಿಕ ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಸದುದ್ದೇಶದಿಂದ ವಿದ್ಯುತ್ ಸಂಪರ್ಕ, ರಸ್ತೆ, ಸುಸಜ್ಜಿತ ಕಟ್ಟಡ ಇವೇ ಮೊದಲಾದ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದ ಸಮಯದಲ್ಲಿ ದಿ| ಸುಬ್ರಾಯ ಹೆಗಡೆ ತ್ಯಾರಗಲ್ ಅಧ್ಯಕ್ಷತೆಯಲ್ಲಿ, ದಿ| ರಾಮಚಂದ್ರ ಭಟ್ಟ ಕಾರ್ಯದರ್ಶಿಗಳಾಗಿ ಒಳಗೊಂಡ 11 ಮಹನೀಯರು 1957 ನವೆಂಬರ್ನಲ್ಲಿ ಸರಕುಳಿ ಶಿಕ್ಷಣ ಸಮಿತಿಯನ್ನು ಸ್ಥಾಪಿಸಿದರು. ಈ ಸಮಿತಿಯ ಸತತ ಪರಿಶ್ರಮದ ಫಲವಾಗಿ 1958ನೇ ಜೂನ್ 19ರಂದು ಶ್ರೀ ಜಗದಂಬಾ ಪ್ರೌಢಶಾಲೆಯು ಅಧಿಕೃತವಾಗಿ ಸ್ಥಾಪಿತವಾಯಿತು. 2 ಕೊಠಡಿಗಳಿಂದ ಆರಂಭವಾಗಿದ್ದ ಶಾಲೆ ಆಡಳಿತ ಮಂಡಳಿಯವರ ಕಠಿಣ ಪರಿಶ್ರಮದ ಫಲವಾಗಿ ಇಂದು ಸುಸಜ್ಜಿತ ವ್ಯವಸ್ಥೆಗಳೊಂದಿಗೆ ನಡೆಯುತ್ತಿದೆ. ಸುಮಾರು 4500ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಅಭ್ಯಸಿಸಿದ್ದು, ಇಂದು ದೇಶ ವಿದೇಶಗಳಲ್ಲಿ ತಮ್ಮ ಸಾಧನೆಯನ್ನು ತೋರುತ್ತಿದ್ದಾರೆ. ಇಂತಹ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ಶಾಲೆಯನ್ನು ಆರಂಭಿಸಿದ ಮಹನೀಯರು ಪ್ರಾತಃಸ್ಮರಣೀಯರಾಗಿದ್ದಾರೆ ಎಂದು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. RDS ಎಂದು ನಾಮಾಂಕಿತವಾಗಿ ಕಳೆದ 5-6 ವರ್ಷಗಳಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್ ಮತ್ತು ಸಮವಸ್ತ್ರವನ್ನು ನೀಡುತ್ತಿದ್ದು, ಈ ವರ್ಷವೂ ಸಹ 8ನೇ ತರಗತಿಗೆ ದಾಖಲಾದ 32ವಿದ್ಯಾರ್ಥಿಗಳಿಗೆ ಸುಮಾರು ರೂ. 1500 ಮೌಲ್ಯದ ಬ್ಯಾಗ್ ಹಾಗೂ ಎರಡು ಜೊತೆ ಸಮವಸ್ತ್ರವನ್ನು ವಿತರಿಸಲಾಯಿತು.
ಏಪ್ರಿಲ್ 2023ರ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 616 ಅಂಕ (98.56%) ಪಡೆದು ರಾಜ್ಯಕ್ಕೆ 10ನೇ ಸ್ಥಾನ ಪಡೆದ ಅಭಿನಂದನ ಹೆಗಡೆ ಈತನನ್ನು ಸನ್ಮಾನಿಸಲಾಯಿತು. 90%ಕ್ಕಿಂತ ಅಧಿಕ ಅಂಕ ಪಡೆದ ಎಲ್ಲಾ 14 ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು. ಇದೇ ಸಮಯದಲ್ಲಿ ಸರಕುಳಿ ಶಿಕ್ಷಣ ಸಮಿತಿಯ ಸದಸ್ಯ ಗಣಪತಿ ಭಟ್ಟ ಕಿಚ್ಚಿಕೇರಿ ಹಾಗೂ ಕುಟುಂಬದವರಿಂದ 90%ಕ್ಕಿಂದ ಅಧಿಕ ಅಂಕ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ತಲಾ 1000=00 ಸಹಾಯಧನ ನೀಡಿ ಪುರಸ್ಕರಿಸಲಾಯಿತು.
ಸರಕುಳಿ ಶಿಕ್ಷಣ ಸಮಿತಿಯ ಇಂದಿನ ಅಧ್ಯಕ್ಷ ಮಂಜುನಾಥ ಹೆಗಡೆ ತ್ಯಾರಗಲ್,ಯಾವುದೇ ಸೌಲಭ್ಯಗಳಿಲ್ಲದ ಸಮಯದಲ್ಲಿ ಸ್ಥಾಪಿತವಾದ ಶ್ರೀ ಜಗದಂಬಾ ಪ್ರೌಢಶಾಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಇಂದು ಹೆಮ್ಮರವಾಗಿ ಬೆಳೆದಿದೆ. ನುರಿತ ಶಿಕ್ಷಕರು, ಶಿಕ್ಷಣಾಧಿಕಾರಿಗಳ ಸಹಕಾರದಿಂದ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ನಮ್ಮ ಪ್ರೌಢಶಾಲೆಯು ಅತ್ಯುತ್ತಮ ಸಾಧನೆಯನ್ನು ತೋರುತ್ತಿದೆ. ಸ್ಥಳೀಯ ಶಿಕ್ಷಣಾಭಿಮಾನಿಗಳು ಹಾಗೂ ಪಾಲಕರ ಸಹಕಾರದಿಂದ ನಮ್ಮ ಶಾಲೆಯು, ಈ ಭಾಗದಲ್ಲಿ ಕಲಿಕೆಗೆ ಹೆಚ್ಚು ಪ್ರಶಸ್ತವಾದ ಶಾಲೆಯೆನಿಸಿದೆ. ಕೇವಲ ಪಠ್ಯವಿಷಯಗಳಲ್ಲದೇ ಸಾಂಸ್ಕೃತಿಕ/ಕ್ರೀಡಾ ವಲಯಗಳಲ್ಲಿಯೂ ಸಹ ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರುತ್ತಿದ್ದಾರೆ. ಮಕ್ಕಳ ಸರ್ವಾಂಗೀಣ ವಿಕಾಸ, ನಮ್ಮ ವಿಶ್ವಾಸ ಎಂಬ ಧ್ಯೇಯದಡಿ ನಾವೆಲ್ಲಾ ಸೇವೆ ಸಲ್ಲಿಸುತ್ತಿದ್ದು, ಇದನ್ನೇ ಮುಂದುವರೆಸುತ್ತೇವೆ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸರಕುಳಿ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ನರಹರಿ ಹೆಗಡೆ, ಸದಸ್ಯರಾದ ಆರ್.ಎಸ್.ಹೆಗಡೆ, ಪಿ.ಆರ್.ಭಟ್ಟ, ಸ್ಥಳೀಯ ದಾನಿಗಳಾದ ವೆಂಕಟೇಶ ಹೇರೂರಕರ್, ರಮೇಶ ಹೇರೂರಕರ್, ಉಮೇಶ ಹೇರೂರಕರ್, ಗಣೇಶ ಹೇರೂರು, ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕರಾದ ಜಿ.ಆರ್.ಭಾಗ್ವತ್ ತ್ಯಾರಗಲ್, ಪ್ರೌಢಶಾಲೆಯ ಎಲ್ಲಾ ಶಿಕ್ಷಕರು, ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು. ಸರಕುಳಿ ಶಿಕ್ಷಣ ಸಮಿತಿಯ ಅಧ್ಯಕ್ಷ ಮಂಜುನಾಥ ಹೆಗಡೆ ತ್ಯಾರಗಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ಶಿಕ್ಷಕರಾದ ಶ್ರೀಮತಿ ಲತಾ ಹೆಗಡೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಮುಖ್ಯಾಧ್ಯಾಪಕ ಕೃಷ್ಣಮೂರ್ತಿ ಎಚ್. ಎಸ್. ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಎಂ.ವಿ.ನಾಯ್ಕ ವಂದಿಸಿದರು.