ಕಾರವಾರ: ಪ್ಯಾರಾಲಿಸಿಸ್ ಬರದಂತೆ ಪಡೆಯುವ ಇಂಜೆಕ್ಷನ್ ತೆಗೆದುಕೊಂಡ ನಂತರ ಕ್ಷಣಮಾತ್ರದಲ್ಲೇ ಮಹಿಳೆಯೋರ್ವಳು ಮೃತಪಟ್ಟ ಘಟನೆ ನಗರದ ಹಳಗಾ ಗ್ರಾಮದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ನಡೆದಿದೆ.
ಸ್ವಪ್ನ ರಾಯ್ಕರ್ (32)ಎಂಬ ಮಹಿಳೆಯೇ ಮೃತ ದುರ್ದೈವಿಯಾಗಿದ್ದು ಈಕೆ ಕೊಪ್ಪಳ ಮೂಲದವರಾಗಿದ್ದಾರೆ. ಸೇಂಟ್ ಇಗ್ನಿಷಿಯಸ್ ಆಸ್ಪತ್ರೆಯು ಪ್ಯಾರಾಲಿಸಿಸ್‌ಗೆ ಇಂಜೆಕ್ಷನ್ ಕೊಡುವುದಕ್ಕೆ ಖ್ಯಾತಿಯನ್ನು ಹೊಂದಿದ್ದು, ಇಲ್ಲಿಗೆ ರಾಜ್ಯ ಹೊರ ರಾಜ್ಯದಿಂದ ಸಾಕಷ್ಟು ಸಂಖ್ಯೆಯಲ್ಲಿ ಇಂಜೆಕ್ಷನ್ ತೆಗೆದುಕೊಳ್ಳಲು ಪ್ರತಿ ನಿತ್ಯ ರೋಗಿಗಳು ಬರುತ್ತಾರೆ.
ಈ ಹಿನ್ನೆಲೆಯಲ್ಲಿ ತಂದೆಗೆ ಇಂಜೆಕ್ಷನ್ ಕೊಡಿಸಲು ಕುಟುಂಬದೊಂದಿಗೆ ಸ್ವಪ್ನ ಸಹ ಬಂದಿದ್ದರು. ಆಗ ವೈದ್ಯರ ಬಳಿ ತಮ್ಮ ಸೊಂಟ ನೋವಿನ ಬಗ್ಗೆಯೂ ಸ್ವಪ್ನ ಹೇಳಿಕೊಂಡಿದ್ದಾರೆ. ಅದಕ್ಕೆ ಆಕೆಯನ್ನು ಪರೀಕ್ಷಿಸಿದ ವೈದ್ಯರು, ಯಾವುದೇ ಸಮಸ್ಯೆ ಇಲ್ಲ ಆದರೆ, ಪ್ಯಾರಾಲಿಸಿಸ್ ಆಗದಂತೆ ಮುಂಜಾಗ್ರತೆಯಾಗಿ ನಮ್ಮಲ್ಲಿ ಕೊಡುವ ಇಂಜೆಕ್ಷನ್ ಪಡೆಯಿರಿ ಎಂದು ಹೇಳಿದ್ದರು.
ಇದಕ್ಕೆ ಕ್ಷಣವೂ ಯೋಚಿಸದ ಸ್ವಪ್ನ ವೈದ್ಯರ ಸಲಹೆಯಂತೆ, ಪ್ಯಾರಾಲಿಸಿಸ್ ಸಹ ಮುಂದಿನ ದಿನಗಳಲ್ಲಿ ಬರುವುದಿಲ್ಲ, ಹೀಗಾಗಿ ಈಗಲೇ ಇಂಜೆಕ್ಷನ್ ತೆಗೆದುಕೊಂಡರೆ ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದು, ತಕ್ಷಣವೇ ವೈದ್ಯರಿಂದ ಇಂಜೆಕ್ಷನ್ ಪಡೆದುಕೊಂಡಿದ್ದಾರೆ.
ಇಂಜೆಕ್ಷನ್ ಪಡೆದ ಸ್ವಪ್ನ ಹಾಸಿಗೆಯಿಂದ ಎದ್ದು ನಿಲ್ಲುತ್ತಿದ್ದಂತೆ ಕುಸಿದುಬಿದ್ದಿದ್ದಾರೆ. ಏನಾಗುತ್ತಿದೆ ಎಂದು ನೋಡುವಷ್ಟರಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ವೈದ್ಯರು ಬಂದು ತಪಾಸಣೆ ನಡೆಸಿದಾಗ ಸ್ವಪ್ನ ಮೃತಪಟ್ಟಿರುವುದು ದೃಢವಾಗಿದೆ. ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ದೂರಿದ್ದಾರೆ. ಮೃತದೇಹವನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು,ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.