ಹೊನ್ನಾವರ: ಪ್ರತಿಯೊಬ್ಬ ಮಗುವಿನಲ್ಲೂ ಯಾವುದಾದರೂ ಒಂದು ಬಗೆಯ ಪ್ರತಿಭೆ ಸುಪ್ತವಾಗಿ ಇದ್ದೇ ಇರುತ್ತದೆ. ಅದನ್ನು ನಾವೇ ಅನ್ವೇಷಿಸಿಕೊಳ್ಳಬೇಕು. ನನ್ನ ಸಾಮರ್ಥ್ಯ ಏನೆಂಬುದನ್ನು ಅರಿತು ಸತತವಾಗಿ ಪರಿಶ್ರಮಪಟ್ಟರೆ ಯಾವುದೂ ಅಸಾಧ್ಯವಲ್ಲ. ನಮ್ಮ ಹಣೆಬರಹ ನಾವೇ ಬರೆಯಬೇಕು ಎಂದು ಮಂಕಿಯ ಸರಕಾರಿ ಪ್ರಥಮ ದರ್ಜೆ ಕಾಲೆಜಿನ ಪ್ರಾಚಾರ್ಯ ಡಾ.ಮಾದೇಶ ಎ. ಅಭಿಪ್ರಾಯಪಟ್ಟರು.
ಅವರು ಕ.ವಿ.ವಿ. ದಾರವಾಡ ಮತ್ತು ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಪದವಿ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕ.ವಿ.ವಿ. ಅಂತರ್‌ಮಹಾವಿದ್ಯಾಲಯಗಳ ಪುರುಷರ ತೃತೀಯ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಷ್ಟಪಟ್ಟವರಿಗೆ ಪ್ರತಿಫಲ ದಕ್ಕುತ್ತದೆ. ಸೋಲುಗಳಿಗೆ ಕುಗ್ಗದೇ ಸವಾಲುಗಳಿಗೆ ಜಗ್ಗದೇ ಗುರಿಯೆಡೆಗೆ ಮುನ್ನುಗ್ಗಬೇಕು. ಯುವಕರೇ ಭಾರತದ ಸಂಪತ್ತು, ಸಹನೆ, ಪರಿಶ್ರಮ, ಶಕ್ತಿ, ಯುಕ್ತಿ, ಪ್ರಾಮಾಣಿಕತೆಗಳನ್ನು ಕ್ರೀಡೆಯಿಂದ ಕಲಿತು, ಜೀವನದಲ್ಲಿ ಅಳವಡಿಸಿಕೊಂಡರೆ ಅವರು ಎಲ್ಲಾ ನರಂಗದಲ್ಲಿಯೂ ಯಶಸ್ವಿಗಳಾಗುತ್ತಾರೆ ಎಂದರು.
ಕಾರ್ಯಕ್ರಮವನ್ನು ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ ಉದ್ಘಾಟಿಸಿದರು. ಪ್ರಾಚಾರ್ಯರಾದ ಡಾ.ವಿಜಯಲಕ್ಷ್ಮಿ ಎಂ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಆರ್.ಕೆ.ಮೇಸ್ತ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು. ಪ್ರೊ.ಪ್ರಶಾಂತ ಮೂಡಲಮನೆ ಕಾರ್ಯಕ್ರಮ ನಿರ್ವಹಿಸಿದರು.