ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ದಾವಣಗೆರೆಯ ಹೊರ ವಲಯದಲ್ಲಿರುವ ರೆಸಾರ್ಟ್ನಲ್ಲಿ ಭೇಟಿ ಮಾಡಿದ್ದಾರೆ. ಈ ಕುರಿತಾಗಿ ರಾಜಕೀಯ ಚರ್ಚೆಗಳು ಕೆಲವು ಊಹಾಪೋಹಗಳು ಹರಿದಾಡುತ್ತಿವೆ. ಈಗಾಗಲೇ ಈ ಕುರಿತು ಸ್ಪಷ್ಟನೆ ಬೊಮ್ಮಾಯಿ ನೀಡಿದ್ದು, ಇದೀಗ ಶಾಮನೂರು ಶಿವಶಂಕರಪ್ಪ ಕೂಡ ಮಾಹಿತಿ ನೀಡಿದ್ದಾರೆ.
ಈ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ಬೊಮ್ಮಾಯಿ ನಾವು ಬೀಗರು, ಚುನಾವಣೆ ಆದ ನಂತರ ಅವರನ್ನ ಭೇಟಿ ಆಗಿರಲಿಲ್ಲ. ಅವರು ಶಾಸಕರಾಗಿ ಆಯ್ಕೆಯಾದರು ನಾನು ಆದೆ. ಚುನಾವಣೆ ಆದ ನಂತರ ಭೇಟಿ ಆದೇವು ಹೀಗೆ ಸಂಬಂಧ ಮುಂದುವರೆಯಲಿ ಎಂದು ಮಾತನಾಡಿದ್ದೇವೆ ಅಷ್ಟೆ. ರಾಜಕೀಯ ಚರ್ಚೆ ನಡೆದಿದೆ ಆ ಬಗ್ಗೆ ನಾನು ಚರ್ಚೆ ಮಾಡಲ್ಲ ಎಂದಿದ್ದಾರೆ.
ಬಳಿಕ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯನ್ನು ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳಬಾರದು. KERC ಅವರು ಬಿಜೆಪಿ ಸರ್ಕಾರದಲ್ಲಿದ್ದಾಗಲೇ ಬೆಲೆ ಏರಿಸಲು ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಬಿಜೆಪಿಯವರು ವಿದ್ಯುತ್ ದರ ಹೆಚ್ಚಿಸಲು ಸಹಿ ಮಾಡಿರಲಿಲ್ಲ. ಇವರು ಏನು ಮಾಡಿದ್ದಾರೋ ನನಗೆ ಗೊತ್ತಿಲ್ಲ. ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳಿಗೆ ಹೊಡೆತ ಬೀಳುತ್ತದೆ. ದರ ಏರಿಕೆ ಮಾಡೋದು ಕಂಡಿಷನ್ ಹಾಕೋದು ಮಾಡಬಾರದು ಎಂದು ತಮ್ಮದೇ ಸರ್ಕಾರದ ಬಗ್ಗೆ ಕಿಡಿ ಕಾರಿದ್ದಾರೆ.
ಅದೇ ರೀತಿ ಬಸ್ನಲ್ಲಿ ಓಡಾಡೋ ಮಹಿಳೆಯರಿಗೆ ಯಾವುದೇ ರೀತಿ ಗುರುತಿನ ಚೀಟಿ ಕೇಳಬಾರದು. ಅವರು ಸೀರೆ ಉಟ್ಟು ಬಂದ್ರೇನೆ ಗೊತ್ತಾಗುತ್ತೆ ಅವರು ಹೆಂಗಸರು ಅಂತ. ಈ ರೀತಿ ಕಂಡಿಷಸ್ನ್ಸ್ ಹಾಕಬಾರದು. ನಾನು ಕಾಂಗ್ರೆಸ್ ಶಾಸಕನಾಗಿಯೇ ಹೇಳುತಿದ್ದೇನೆ ಅಂತ ತಮ್ಮ ಸರ್ಕಾರದ ವಿರುದ್ಧವೇ ವಾಗ್ದಾಳಿ ಮಾಡಿದ್ದಾರೆ.