ಕಾರವಾರ: ಕಾಂಗ್ರೆಸ್‌ನ ಗ್ಯಾರೆಂಟಿ ಮಾತಿಗೆ ಯಾವುದೇ ಗ್ಯಾರೆಂಟಿ ಇಲ್ಲ ಎನ್ನುವುದು ಜನರಿಗೆ ಸ್ಪಷ್ಟವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ವಾಗ್ದಾಳಿ ನಡೆಸಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೂ ಪೂರ್ವ ಎಲ್ಲರಿಗೂ 200 ಯುನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿದ್ದರು. ಆದರೆ ಚುನಾವಣೆಯಲ್ಲಿ ಗೆದ್ದ ಬಳಿಕ ಅದಕ್ಕೆ ಷರತ್ತು ವಿಧಿಸಿದ್ದಾರೆ. ವಿಕಾಸವಾದಕ್ಕೆ ಮುಳುವಾದ, ಬೆನ್ನಿನಲ್ಲಿ ಚೂರಿ ಹಾಕುವ ಕೃತ್ಯವನ್ನ ಕಾಂಗ್ರೆಸ್ ಮಾಡಿದೆ ಎಂದು ದೂರಿದರು.
ಕಾಂಗ್ರೆಸ್ ಉಚಿತ ವಿದ್ಯುತ್ ನೀಡಿ ರಾಜ್ಯಕ್ಕೆ ಬೆಳಕು ನೀಡುತ್ತದೆ ಎಂದುಕೊಂಡಿದ್ದೆವು. ಆದರೆ ಪ್ರತಿ ಮನೆಗೂ ಬೆಂಕಿ ಹಚ್ಚಿದ್ದಾರೆ. ಈ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಮೂರು ಪಟ್ಟು ದರ ಹೆಚ್ಚಿಸಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ದರ ಏರಿಕೆ ಪ್ರಸ್ತಾವ ಆಗಿದ್ದರೂ ತಿರಸ್ಕಾರ ಮಾಡುವ ಅಧಿಕಾರ ಈಗಿನ ಕಾಂಗ್ರೆಸ್‌ಗೆ ಇತ್ತು ಎಂದರು. ಸಣ್ಣ-ಸಣ್ಣ ಉದ್ದಿಮೆಗಳನ್ನು ನಡೆಸಿ ಜೀವನ ನಿರ್ವಹಣೆ ಮಾಡುತ್ತಿರುವವರಿಗೆ ಸಾವಿರಾರು ರೂ.ಗಳ ವಿದ್ಯುತ್ ಬಿಲ್ ವಿಧಿಸಿ ಅವರನ್ನು ನಿರುದ್ಯೋಗಿಯನ್ನಾಗಿಸಲು ಹೊರಟಿದೆ. ಪ್ರತಿಯೊಬ್ಬರಿಗೂ 200 ಯುನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿದ್ದ ಕಾಂಗ್ರೆಸ್ ಈಗ 200 ಯುನಿಟಕ್ಕಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ರಿಯಾಯತಿ ನೀಡುವುದರಿಂದ ಹಿಂದೇಟು ಹಾಕಿದೆ ಎಂದು ವಾಗ್ದಾಳಿ ನಡೆಸಿದರು.