ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಈ ತಿಂಗಳು ಅಮೆರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿ ಈಗಾಗಲೇ ಮೋದಿ ಮೇನಿಯಾ ಆರಂಭವಾಗಿದೆ. ನ್ಯೂಜೆರ್ಸಿ ಮೂಲದ ರೆಸ್ಟೋರೆಂಟ್ ಒಂದು ಮೋದಿ ಹೆಸರಲ್ಲಿ ಆಹಾರವನ್ನು ಸಿದ್ಧಪಡಿಸಿದೆ. ಇದಕ್ಕೆ ‘ಮೋದಿ ಜೀ ಥಾಲಿ’ ಎಂದು ಹೆಸರಿಟ್ಟಿದೆ.
ಈ ಥಾಲಿಯನ್ನು ಹೊಟೇಲ್‌ನ ಬಾಣಸಿಗ ಶ್ರೀಪಾದ್ ಕುಲಕರ್ಣಿ ಎಂಬುವವರು ಸಿದ್ಧಪಡಿಸಿದ್ದಾರೆ. ಖಿಚಡಿ, ರಸಗುಲ್ಲಾ, ಸಾರ್ಸನ್ ಕಾ ಸಾಗ್, ಕಾಶ್ಮೀರಿ ದಮ್ ಆಲೂ, ಇಡ್ಲಿ, ಧೋಕ್ಲಾ, ಚಾಂಚ್ ಮತ್ತು ಪಾಪಡ್‌ನಂತಹ ಸಾಂಪ್ರದಾಯಿಕ ಭಾರತೀಯ ಭಕ್ಷ್ಯಗಳನ್ನು ಒಳಗೊಂಡಿದೆ. ಮೋದಿ ಗೌರವಾರ್ಥ ಇದನ್ನು ಸಿದ್ಧಪಡಿಸಿರುವುದಾಗಿ ರೆಸ್ಟೋರೆಂಟ್ ಹೇಳಿದೆ. ಇನ್ನೊಂದೆಡೆ ಮೋದಿ ಅವರ ಸ್ವಾಗತಕ್ಕೆ ಅಮೆರಿಕಾ ಎಲ್ಲ ಸಿದ್ಧತೆಯನ್ನು ನಡೆಸಿದೆ. ಮೋದಿಗೆ ರತ್ನಗಂಬಳಿಯ ಸ್ವಾಗತ ದೊರೆಯುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಬಾಣಸಿಗ ಕುಲಕರ್ಣಿ ಅವರ ಪ್ರಕಾರ, ಅಲ್ಲಿ ವಾಸಿಸುವ ಅನಿವಾಸಿ ಭಾರತೀಯರ ಬೇಡಿಕೆಯಂತೆ ಈ ಥಾಲಿಯನ್ನು ಸಿದ್ಧಪಡಿಸಲಾಗಿದೆಯಂತೆ. ಇದರ ಜೊತೆಗೆ ಇದಕ್ಕೆ ಸಿರಿಧಾನ್ಯಗಳನ್ನು ಬಳಸಿ ತಯಾರಿಸಿದ ಭಕ್ಷ್ಯಗಳನ್ನು ಸೇರಿಸುವ ಮೂಲಕ ಭಾರತ ಸರ್ಕಾರದ ಶಿಫಾರಸಿನಂತೆ ವಿಶ್ವಸಂಸ್ಥೆಯಿಂದ 2023 ರನ್ನು ಅಂತಾರಾಷ್ಟ್ರೀಯ ಸಿರಿಧಾನ್ಯದ ವರ್ಷವೆಂದು ಘೋಷಿಸಿದ್ದರ ಗೌರವಾರ್ಥವಾಗಿಯೂ ಈ ಥಾಲಿ ಸಿದ್ಧಪಡಿಸಲಾಗಿದೆ.