ದಾಂಡೇಲಿ: ನಗರದ ರೋಟರಿ ಆಂಗ್ಲ ಮಾಧ್ಯಮ ಕಿ.ಪ್ರಾ.ಶಾಲೆಯಲ್ಲಿ ಅರ್ಥಪೂರ್ಣವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ರೋಟರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅರುಣ್ ನಾಯಕ ಉದ್ಘಾಟಿಸಿ ಮಾತನಾಡುತ್ತಾ, ನಾವಿಂದೂ ಆರೋಗ್ಯವಾಗಿದ್ದೇವೆ, ನೆಮ್ಮದಿಯ, ಸಂತೃಪ್ತಿಯ ಜೀವನ ನಡೆಸುತ್ತಿವೆ ಎಂದಾದರೆ ಅದು ಈ ಪರಿಸರ ಕೊಟ್ಟ ಬಹುದೊಡ್ಡ ಕೊಡುಗೆ ಎನ್ನುವುದನ್ನು ಪ್ರತಿಯೊಬ್ಬರು ಅರಿತು ನಡೆದುಕೊಳ್ಳಬೇಕು. ಪರಿಸರ ಸಂರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.
ನಗರದ ನ್ಯಾಯವಾದಿ ಸೋಮಕುಮಾರ್.ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಮರ ಗಿಡಗಳನ್ನು ಪೂಜ್ಯ ಭಾವನೆಯಿಂದ ನೋಡುವ, ಗೌರವಿಸುವ ಸಂಸ್ಕೃತಿ ನಮ್ಮದು. ಅದನ್ನು ಜೀವನದುದ್ದಕ್ಕೂ ಮುಂದುವರಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಪರಿಸರದಿಂದಾಗಿ ನಾವು, ನಮ್ಮಿಂದ ಪರಿಸರಕ್ಕೇನು ಎನ್ನುವುದನ್ನು ಚಿಂತನೆ ಮಾಡಬೇಕೆಂದು ಕರೆ ನೀಡಿ, ಪರಿಸರ ರಕ್ಷಣೆಯಲ್ಲಿ ಪ್ರಾಮಾಣಿಕವಾಗಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತಾ ಸಾಲಸ್ಕರ್ ಅವರು ಸ್ವಾಗತಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಜರುಗಿತು.