ಕುಮಟಾ: ವಜ್ರ ಮಹೋತ್ಸವದ ಹೊಸ್ತಿಲಿನಲ್ಲಿರುವ ಪಟ್ಟಣದ ಚಿತ್ರಗಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಸ್ಥಾಪನಾ ದಿನಾಚರಣೆ ಸಂಪ್ರದಾಯದಂತೆ ಶಾಲೆಯ ಪಿ.ಆರ್.ನಾಯಕ ಸಭಾಭವನದಲ್ಲಿ ವಿಭಿನ್ನವಾಗಿ ನಡೆಯಿತು.
1966 ಜೂನ್ 3 ರಂದು ಸ್ಥಾಪನೆಗೊಂಡು ವಜ್ರ ಮಹೋತ್ಸವದ ಹೊಸ್ತಿಲಿನಲ್ಲಿರುವ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಸ್ಥಾಪನಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮವನ್ನು ಕೆ.ಇ. ಸೊಸೈಟಿಯ ಉಪಾಧ್ಯಕ್ಷ ಮೋಹನ ನಾಗಪ್ಪ ಶಾನಭಾಗ ಉದ್ಘಾಟಿಸಿದರು. ಶಾಲೆಯ ವಿವಿಧ ಭಾಷೆ ಹಾಗೂ ವಿಷಯ ಸಂಘಗಳ ಕಾರ್ಯ ಚಟುವಟಿಕೆಗಳಿಗೂ ಚಾಲನೆ ನೀಡಿ ಶುಭ ಹಾರೈಸಿದರು.
ಗಣಿತ ಶಿಕ್ಷಕ ಅನಿಲ ರೋಡ್ರಿಗಿಸ ಸರ್ವರನ್ನು ಸ್ವಾಗತಿಸಿ, ಎಸ್.ಎಸ್.ಎಲ್.ಸಿ. ಫಲಿತಾಂಶದ ವಿಶ್ಲೇಷಣೆಯನ್ನು ಹಾಗೂ ಶ್ರೇಯಾಂಕಿತರನ್ನು ಸಭೆಗೆ ಪರಿಚಯಿಸಿದರು. ಶಾಲೆ ಹಾಗೂ ಸಮಸ್ತ ವಿದ್ಯಾರ್ಥಿಗಳ ವತಿಯಿಂದ ಪ್ರಥಮ ಮೂರು ಸ್ಥಾನಗಳಿಸಿದ ಶ್ರೇಯಾಂಕಿತರಾದ ನೇಹಾ ಗೌಡ, ಭೂಮಿಕಾ ಹಿಣಿ, ನಂದನ ಗೌಡ, ರಕ್ಷಿತಾ ಮಡಿವಾಳ,ಹೂಪ್ರಿಯಾ ಪಟಗಾರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅತ್ಯುತ್ತಮ ಫಲಿತಾಂಶಕ್ಕೆ ಕಾರಣರಾದ ಸರ್ವ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಯನ್ನು ಮುಖ್ಯಶಿಕ್ಷಕ ಪಾಂಡುರಂಗ ಶೇಟ್ ವಾಗ್ರೇಕರ ಸನ್ಮಾನಿಸಿ ಗೌರವಿಸಿದರು. ಶಾಲೆ ಸ್ಥಾಪನೆಗೊಂಡು ನಡೆದು ಬಂದ ದಾರಿಯ ಕುರಿತು ಶಿಕ್ಷಕ ಕಿರಣ ಪ್ರಭು ಪ್ರಾಸ್ತಾವಿಸಿದರು. ವರ್ಷಂ ಪ್ರತಿ ಕೊಡಮಾಡುವ ಮುಕುಂದ ಶಾನಭಾಗ ಕಲ್ಬಾಕರ, ಮೋಹನ ಶಾನಭಾಗ, ಗಣಪತಿ ಕೃಷ್ಣ ಶಾನಭಾಗ, ಎನ್.ಎಸ್. ಕಾಮತ ಸಿರಸಿ, ವಿಷ್ಣು ಶಾನಭಾಗ ಶಿಷ್ಯವೇತನವನ್ನು ಉಪಸ್ಥಿತ ಗಣ್ಯರು ವಿತರಿಸಿದರು. ಅಲ್ಲದೇ ದಿ. ಲಕ್ಷ್ಮೀಬಾಯಿ ನಾಗಪ್ಪ ಶಾನಭಾಗ, ದಿ.ಅನಂತ ಶಂಕರ ಶಾನಭಾಗ ಸ್ಮರಣಾರ್ಥ ದತ್ತಿ ನಿಧಿ ಹಾಗೂ ಸುಶೀಲಾ ಶಾನಭಾಗ, ಮುಕುಂದ ಕೃಷ್ಣ ಶಾನಭಾಗರವರ ದತ್ತಿ ನಿಧಿ ಹಣದಿಂದ ನೋಟ್ ಬುಕ್‌ಗಳನ್ನು ನೂರು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕ ಪಾಂಡುರಂಗ ಶೇಟ್ ವಾಗ್ರೇಕರನ್ನು ಸಮಸ್ತ ಶಿಕ್ಷಕ ವೃಂದ ಸನ್ಮಾನಿಸಿ ಗೌರವಿಸಿತು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ಶಾಲಾ ವತಿಯ ಸಿಹಿಯೊಂದಿಗೆ ಪಾಲಕರಾದ ಎಂ.ಜಿ. ಭಟ್ ಪುತ್ರನ ಉಪನಯನದ ಸವಿ ನೆನಪಿನಲ್ಲಿ ನೀಡಿದ ಸಿಹಿ ವಿತರಣೆಯಿಂದ ಕೊನೆಗೊಂಡಿತು. ಶಿಕ್ಷಕ ವಿಷ್ಣು ಭಟ್ ನಿರೂಪಿಸಿದರು. ಶಿಕ್ಷಕ ಸುರೇಶ ಪೈ ವಂದಿಸಿದರು. ಸರ್ವ ಶಿಕ್ಷಕ- ಶಿಕ್ಷಕೇತರ ವೃಂದ ಸಹಕರಿಸಿದರು.