ಭಟ್ಕಳ: ಚುನಾವಣೆ ಎದುರಿಸಲು ನನ್ನ ಬಳಿ ಹಣ ಇರಲಿಲ್ಲ. ಮಹಿಳೆಯರು ತಮ್ಮಲ್ಲಿರುವ ಚಿನ್ನವನ್ನು ಅಡವಿಟ್ಟು ನನಗೆ ಹಣ ತಂದು ಕೊಟ್ಟಿದ್ದಾರೆ. ನಾನು ಯಾವತ್ತೂ ಹಣವನ್ನು ಪ್ರೀತಿಸಲಿಲ್ಲ, ಮನುಷ್ಯರನ್ನು ಪ್ರೀತಿಸಿದ್ದೇನೆ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.
ಅವರು ನಗರದ ನಾಗಯಕ್ಷೆ ಸಭಾಭವನದಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಅಭಿನಂದಾನ ಸಮಾರಂಭದಲ್ಲಿ ಮಾತನಾಡಿದರು. ಚುನಾವಣಾ ಪ್ರಚಾರದಲ್ಲಿ ರಾಜಕಾರಣಿಯೊಬ್ಬ ಮತದಾರನ ಕಾಲಿಗೆ ಎರಗುತ್ತಾನೆ. ಅದು ರಾಜಕಾರಣವಲ್ಲ. ಗೆದ್ದ ನಂತರ ಮತದಾರನ ಕಾಲಿಗೆ ಬೀಳುವುದಿದೆಯಲ್ಲ ಅದು ಅಸಲಿ ರಾಜಕಾರಣವಾಗಿದೆ ಎಂದ ಅವರು ನಾನು ಬಡಜನರನ್ನು ಪ್ರೀತಿಸುತ್ತೇನೆ, ಅಷ್ಟೇ ಅಲ್ಲ ಅವರನ್ನು ಗೌರವಿಸುತ್ತೇನೆ. ಅದಕ್ಕಾಗಿ ನನ್ನಲ್ಲಿ ಹಣ ಇಲ್ಲದಿದ್ದಾಗ ಜನರೇ ನನಗೆ ಹಣ ಸಹಾಯ ಮಾಡಿದರು. ಚುನಾವಣೆ ಮುಗಿದಾಗ ನನ್ನ ಬಳಿ ಮತ್ತೊಂದು ಚುನಾವಣೆ ಎದುರಿಸುವಷ್ಟು ಹಣ ಇತ್ತು. ಎಲ್ಲರಿಗೂ ಅದನ್ನು ಮರಳಿಸಿದ್ದೇನೆ. ಮತ್ತೂ ಸ್ವಲ್ಪ ಹಣ ಮರಳಿಸುವುದಿದೆ ಎಂದರು.
ನಿನ್ನ ಮನೆಗೆ ಬಂದ ಬಡವನನ್ನು ಬರಿಗೈಯಲ್ಲಿ ಕಳುಹಿಸಿಕೊಡಬೇಡ, ದೇವರು ನಿನಗೆ ಬೇರೆ ರೂಪದಲ್ಲಿ ಸಹಾಯ ಮಾಡುವನು ಎಂದು ನನ್ನ ಗುರುಗಳು ಹೇಳಿದ್ದರು. ಅವರ ತತ್ವಸಿದ್ಧಾಂತದಂತೆ ನಾನು ನಡೆದುಕೊಳ್ಳುತ್ತಿದ್ದೇನೆ. ದೇವರು ಜನರ ಮೂಲಕವೇ ನನಗೆ ಎಲ್ಲ ರೀತಿಯ ಸಹಾಯ ಮಾಡುತ್ತಿದ್ದಾನೆ ಎಂದು ಹೇಳಿದರು.
ಚುನಾವಣೆಯಲ್ಲಿ ನನ್ನನ್ನೂ ಸೋಲಿಸಲು ಯಾವ ರೀತಿಯ ಸುಳ್ಳು ಹೇಳಲೂ ಸಾಧ್ಯವೋ ಆ ಎಲ್ಲ ಸುಳ್ಳುಗಳನ್ನು ಹೇಳಿದರು. ವಾಟ್ಸಪ್, ಫೇಸ್ಬುಕ್ ಮೂಲಕ ಮಾಡಬಾರದನ್ನೆಲ್ಲವನ್ನೂ ಮಾಡಿದರು. ಆದರೆ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಗಟ್ಟಿಯಾಗಿ ನೆಲೆ ನಿಂತ ಕಾರಣ ಇಂದು ನಾನು ಇಲ್ಲಿ ಅಭಿನಂದನೆ ಸ್ವೀಕರಿಸುತ್ತಿರುವುದು. ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ನೀಡಿ ಅಭೂತಪೂರ್ವ ಗೆಲುವಿಗೆ ನೀವು ಸಾಕ್ಷಿಯಾಗಿದ್ದೀರಿ. ಈ ಅಭಿನಂದಗೆ ಕೇವಲ ನೀವು ಮಾತ್ರ ಅರ್ಹರಾಗಿದ್ದೀರಿ ಎಂದು ಕಾರ್ಯಕರ್ತರಿಗೆ ಹೇಳಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ ಅವರು ನಿಮ್ಮ ಒಂದು ಚಿಕ್ಕ ದುರ್ವತನೆಯಿಂದಾಗಿ ಇಡಿ ಪಕ್ಷಕ್ಕೆ ಕೆಟ್ಟ ಹೆಸರು ಬರಬಹುದು, ಯಾವುದೇ ಅಧಿಕಾರಿಗಳ ವಿರುದ್ಧ ಕೆಟ್ಟದ್ದಾಗಿ ಮಾತನಾಡಬೇಡಿ, ನಮ್ಮ ಅಧಿಕಾರಿಗಳ ಬಳಸಿಕೊಂಡು ಜನರಿಗೆ ಒಳಿತಾಗುವ ಕೆಲಸ ಮಾಡಿ. ಭಟ್ಕಳದಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆ ತರುವ ಕೆಸಲಗಳಿಗೆ ಕೈಹಾಕದಿರಿ. ಇದಕ್ಕೆ ನಾನು ಯಾರಿಗೂ ಅವಕಾಶ ಮಾಡಿಕೊಡುವುದಿಲ್ಲ ಎಂದರು.
ಜಿ.ಪA., ತಾ.ಪಂ ಚುನಾವಣೆಗೆ ಸಜ್ಜಾಗಿ: ಇನ್ನೂ ಕೆಲವು ತಿಂಗಳುಗಳಲ್ಲಿ ಜಿ.ಪಂ. ತಾಲೂಕು ಪಂಚಾಯತ್ ಚುನಾಣೆಗಳು ಬರುತ್ತಿವೆ. ಇದೇ ಹುರುಪಿನೊಂದಿಗೆ ಮುಂಬರುವ ಚುನಾವಣೆಯನ್ನು ಎದುರಿಸಬೇಕಾಗಿದೆ. ಅಲ್ಲದೆ 2024ರ ಲೋಕಸಭೆ ಚುನಾವಣೆಯಲ್ಲೂ ನಾವು ವಿಜಯಿಗಳಾಗಬೇಕಿದೆ. ಈ ಚುನಾವಣೆಗಳು ಮುಂದಿನ ರಾಜಕೀಯ ದೃಷ್ಟಿಯಿಂದ ಅತಿ ಪ್ರಾಮುಖ್ಯವಾಗಿದೆ. ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಾಗದೆ ಇದ್ದರೂ ಬೇಸರಿಸಿಕೊಳ್ಳದಿರಿ. ಮುಂದೆ ಹಲವು ಅವಕಾಶವನ್ನು ನಾನು ಮಾಡಿಕೊಡುತ್ತೇನೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ, ತಂಝೀಮ್ ಮಾಜಿ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವೇಝ್, ಹಿರಿಯ ಮುಖಂಡರಾದ ಎಲ್.ಎಸ್.ನಾಯ್ಕ, ರಾಮಾ ಮೊಗೇರ್, ಸೋಮಯ್ಯ ಗೊಂಡ, ಸಚಿವರ ಪತ್ನಿ ಪುಷ್ಪಲತಾ ವೈದ್ಯ, ಪುತ್ರಿ ಬೀನಾ ವೈದ್ಯ ಮತ್ತಿತರರು ಮಾತನಾಡಿದರು.
ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್, ಜಿ.ಪಂ. ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ್,ಭಟ್ಕಳ ಮಹಿಳಾ ಕಾಂಗ್ರೇಸ್ ಅಧ್ಯಕ್ಷ ನಯನಾ ನಾಯ್ಕ, ಶ್ರೀಕಂಠ ಹೆಬ್ಬಾರ್, ಸಿಂಧೂ ಭಾಸ್ಕರ್ ನಾಯ್ಕ, ಗ್ರಾ.ಪಂ ಅಧ್ಯಕ್ಷರಾದ ರಾಜು ನಾಯ್ಕ ಕೊಪ್ಪ, ನಾಗಪ್ಪ ನಾಯ್ಕ ಮುಂಡಳ್ಳಿ, ಮಾಸ್ತಿ ಗೊಂಡ, ನಾಗಮ್ಮ ನಾಯ್ಕ, ಭಟ್ಕಳ ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ನಾಗರಾಜ್ ಮೊಗೇರ್ ಕಾರ್ಯಕ್ರಮ ನಿರೂಪಿಸಿದರು. ವಿಷ್ಣು ದೇವಾಡಿಗ ಧನ್ಯವಾದ ಅರ್ಪಿಸಿದರು.