ಗೋಕರ್ಣ: ಇಲ್ಲಿ ಸಮೀಪದ ಮೂಡಂಗಿಯಿಂದ ಸಾಣಿಕಟ್ಟಾದವರೆಗೆ ಖಾರ್ಲೆಂಡ್ ನಿರ್ಮಾಣಕ್ಕೆ ಶಾಸಕ ದಿನಕರ ಶೆಟ್ಟಿಯವರು 8 ಕೋಟಿ 93 ಲಕ್ಷದ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ವರ್ಷ ಕಳೆಯುತ್ತ ಬಂದರೂ ಕೂಡ ಈ ಯೋಜನೆ ಮುಗಿಯದೇ ಇರುವುದು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ.
ಮಳೆಗಾಲದಲ್ಲಿ ನೀರು ಜನವಸತಿ ಪ್ರದೇಶಗಳಿಗೆ ನುಗ್ಗದಂತೆ ಮತ್ತು ಬೇಸಿಗೆಯಲ್ಲಿ ಉಪ್ಪು ನೀರು ಒಳಪ್ರವೇಶಿಸದಂತೆ ಮಾಡಲು ಈ ಯೋಜನೆಯನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಇದರ ಗುತ್ತಿಗೆಯನ್ನು ಪಡೆದ ಪ್ರದೀಪ ಕನ್ಸ್ಟ್ರಕ್ಷನ್ಸ್ ಕಂಪನಿ ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದೆ.
ಈ ಕಾಮಗಾರಿಗೆ ಸಾಮರ್ಥ್ಯದಷ್ಟು ತಡೆಗೋಡೆ ನಿರ್ಮಾಣದ ಚಿರೆಕಲ್ಲುಗಳನ್ನು ಹಾಕುವುದರ ಬದಲು ಸಣ್ಣಪುಟ್ಟ ಗಾತ್ರದ ಅದರಲ್ಲೂ ಸಣ್ಣ ಸಣ್ಣ ಕಲ್ಲುಗಳನ್ನು ಹಾಕಿ ಕಾಮಗಾರಿ ಮುಕ್ತಾಯಕ್ಕೆ ತಂದಿದ್ದಾರೆ. ಇದು ಹೀಗೆ ಮುಂದುವರೆದರೆ ಬರುವ ಮಳೆಗಾಲದಲ್ಲಿ ನೀರಿನ ಒತ್ತಡಕ್ಕೆ ಸಂಪೂರ್ಣ ಕೊಚ್ಚಿಹೋಗುವ ಸಾಧ್ಯತೆಯಿದೆ. ಹೀಗಾಗಿ ಅತಿ ಮಳೆಯಿಂದಾಗಿ ಕಾಮಗಾರಿಗೆ ಹಾನಿಯಾಗಿದೆ ಎಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ದಿನಕರ ಶೆಟ್ಟಿ ಅವರು ಕೂಡಲೇ ಕಾಮಗಾರಿಯನ್ನು ಪರಿಶೀಲಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಖಾರ್ಲೆಂಡ್ ಜನರ ಉಪಯೋಗಕ್ಕೋ ಅಥವಾ ಗುತ್ತಿಗೆದಾರರ ಅಧಿಕಾರಿಗಳ ಲಾಭಕ್ಕೊ ಎನ್ನುವ ಪರಿಸ್ಥಿತಿ ಉಂಟಾಗಿದೆ. ಸಾಮರ್ಥ್ಯಕ್ಕಿಂತ ಕಡಿಮೆ ಇರುವ ಚಿರೇಕಲ್ಲುಗಳನ್ನು ಈ ಕಾಮಗಾರಿಗೆ ಬಳಸಿದ್ದರಿಂದಾಗಿ ಅದು ನೀರಿನ ಒತ್ತಡಕ್ಕೆ ಕೊಚ್ಚಿ ಹೋಗುವ ಸಾಧ್ಯತೆಗಳಿವೆ. ಹೀಗಾಗಿ ಈ ಯೋಜನೆಯ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.