ಯಲ್ಲಾಪುರ: ವಿದ್ಯಾರ್ಥಿಗಳು ವಿದೇಶಿ ವ್ಯಾಮೋಹಕ್ಕೊಳಗಾಗದೇ ತಮ್ಮ ದೇಶದಲ್ಲಿಯೇ ಸಾಧಕರಾಗಬೇಕು ಎಂದು ವಿಆರ್‌ಎಲ್ ಉದ್ಯಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ವಿಜಯ ಸಂಕೇಶ್ವರ ಹೇಳಿದರು.
ಅವರು ಸೋಮವಾರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ 2023-24ನೇ ಶೈಕ್ಷಣಿಕ ವರ್ಷದ ಕಲಿಕಾ ಪ್ರಾರಂಭೋತ್ಸವವನ್ನು ಉದ್ಘಾಟಿಸಿ, ಪತ್ರಿಕೋದ್ಯಮ ತರಗತಿಯ ಶಾಲೆಯ ವಿವರ ಪಟ್ಟಿಯನ್ನು ಬಿಡುಗಡೆ ಮಾಡಿ, ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಬದುಕನ್ನು ನಿರ್ಧರಿಸಲಾರದು. ಜೀವನ ಅನುಭವದೊಂದಿಗೆ ಕಷ್ಟಪಟ್ಟು ಅಧ್ಯಯನ ಮಾಡಿದರೆ ನಿರೀಕ್ಷಿತ ಸಾಧನೆ ಸಾಧ್ಯವಾಗುತ್ತದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಧಾರವಾಡ ಕರ್ನಾಟಕ ವಿ.ವಿಯ ಉಪಕುಲಪತಿ ಡಾ.ಕೆ.ಬಿ.ಗುಡಸಿ ಮಾತನಾಡಿ, ದೇಶದ ಒಳಿತಿಗಾಗಿ ಭವಿಷ್ಯದ ಕುರಿತು ಚಿಂತಿಸುವ ಮತ್ತು ಕನಸು ಕಾಣುವ ವ್ಯಕ್ತಿಗಳು ಬೇಕು. ನಾವೆಲ್ಲರೂ ನಿರೀಕ್ಷಿಸುತ್ತಿದ್ದ ಶೈಕ್ಷಣಿಕ ಕಾಯ್ದೆ ಜಾರಿಗೆ ಬರಲು 70 ವರ್ಷ ಬೇಕಾಯಿತು. ಈ ರಾಷ್ಟ್ರೀಯ ಕಾನೂನು ಯಾವುದೇ ಅಡೆತಡೆಗಳಿಲ್ಲದೇ ನಿರಂತರ ಸಾಗಲಿ. ವಿಶ್ವದರ್ಶನದ ಉತ್ತಮ ಶೈಕ್ಷಣಿಕ ಪ್ರಯತ್ನಗಳಿಗೆ ಕ.ವಿ.ವಿ ಸದಾ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೇಮನೆ ಮಾತನಾಡಿ, ಯಶಸ್ವಿ ಉದ್ಯಮಿಯಾಗಿರುವ ವಿಜಯ ಸಂಕೇಶ್ವರರವರು ನಮಗೆಲ್ಲರಿಗೂ ಮಾದರಿ ಎಂದರು. ಮತ್ತೋರ್ವ ಅತಿಥಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ನಿರ್ದೇಶಕರೂ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟೀಹೊಳೆ ಮಾತನಾಡಿದರು.
ಶಿರಸಿಯ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿ ಹರ್ಷಿತಾಳ ಪ್ರಾರ್ಥಿಸಿದಳು. ವಿಶ್ವದರ್ಶನ ಪ.ಪೂ ಕಾಲೇಜು ಪ್ರಾಂಶುಪಾಲ ಡಿ.ಕೆ.ಗಾಂವ್ಕರ್ ಹಾಗೂ ಸಿಬಿಎಸ್‌ಸಿ ಉಪ ಪ್ರಾಂಶುಪಾಲರಾದ ಆಸ್ಮಾ ಶೇಕ್ ನಿರ್ವಹಿಸಿದರು. ಸಿಬಿಎಸ್‌ಸಿ ವಿಭಾಗದ ಪ್ರಾಂಶುಪಾಲರಾದ ಮಹಾದೇವಿ ಭಟ್ಟ ವಂದಿಸಿದರು.