ಯಲ್ಲಾಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಭೌದ್ಧಿಕ ಕಸರತ್ತುಗಳನ್ನು ನೀಡುವ ಕೆಲಸ ಗ್ರಂಥಾಲಯಗಳಿಂದ ಮಾತ್ರ ಸಾಧ್ಯವಿದೆ. ಓದುವ ಹವ್ಯಾಸವನ್ನು ಮಕ್ಕಳಿಗೆ ಇಂತಹ ಬೇಸಿಗೆ ಶಿಬಿರದ ಮೂಲಕ ಬೆಳಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶಿಕ್ಷಕಿ ಯಮುನಾ ಪಿ.ನಾಯ್ಕ ಹೇಳಿದರು.
ಅವರು ಕುಂದರಗಿ ಗ್ರಾಮ ಪಂಚಾಯತ ಗ್ರಂಥಾಲಯದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮುಂಡಗೋಡ ತಾಲ್ಲೂಕಾ ಅನುದಾನಿತ ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ವಿನಾಯಕ ಶೇಟ್ ಮಾತನಾಡಿ, ಸಾಹಿತ್ಯದ ಅಭಿರುಚಿ ಹೆಚ್ಚಿಸಲು ಮತ್ತು ಪಠ್ಯೇತರವಾದ ಚಟುವಟಿಕೆಗಳಿಗೆ ಗ್ರಂಥಾಲಯದ ಈ ಬೇಸಿಗೆ ಶಿಬಿರ ನೆರವಾದರೆ ರಜೆಯ ಅವಧಿ ಸಾರ್ಥಕವಾಗಬಲ್ಲದು. ಉತ್ತಮ ಪುಸ್ತಕಗಳ ಸಂಗ್ರಹ ಇಲ್ಲಿದೆ ಎಂದು ನುಡಿದರು.
ವೇದಿಕೆಯಲ್ಲಿ ಸಂಪನ್ಮೂಲ ಶಿಕ್ಷಕ ಮುರಳೀಧರ ಶಿರನಾಲೆ, ಪ್ರಗತಿ ವಿದ್ಯಾಲಯದ ಕಾರ್ಯನಿರ್ವಾಹಕ ಸಂತೋಷ ಶೇಟ್ ಉಪಸ್ಥಿತರಿದ್ದರು. ಗ್ರಂಥಾಲಯದ ಮೇಲ್ವಿಚಾರಕಿ ರೀಟಾ ರೋಖಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕುಂದರಗಿ ಪಂಚಾಯತ ಪಿಡಿಓ ರವಿ ಪಟಗಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಂಚಾಯತ ಸಿಬ್ಬಂದಿ ದತ್ತಾತ್ರೇಯ ನಾಯ್ಕ ವಂದಿಸಿದರು. ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಶಾಲಾ ವಿದ್ಯಾರ್ಥಿಗಳು ಬೇಸಿಗೆ ಶಿಬಿರದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಶಿಬಿರ ಯಶಸ್ವಿಗೊಳಿಸಿದರು.