ಅಂಕೋಲಾ: ತಾಲೂಕಿನ ಪುರಲಕ್ಕಿ ಬೇಣದ ಬಳಿ ರೈಲ್ವೆ ಹಳಿ ಮೇಲೆ ಛಿದ್ರ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತ ದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಉದಯ ಬುದ್ದು ಲಕ್ಷೇಶ್ವರ (58) ಎಂದು ಗುರುತಿಸಲಾಗಿದೆ. ಸಾಯಂಕಾಲ 4.30 ರಿಂದ 6-00 ಘಂಟೆ ಅವಧಿಯೊಳಗೆ ಅವರು ಪುರಲಕ್ಕಿ ಬೇಣದ ಬಳಿಯ ರೈಲ್ವೆ ಟ್ರ್ಯಾಕ್ ಬಳಿ ಹೋದಾಗ, ಅದೇ ಸಮಯಕ್ಕೆ ರೈಲು ಬಡಿದು ಪರಿಣಾಮ ತನ್ನ ತಂದೆ ಮೃತಪಟ್ಟಿರುವುದಾಗಿ ಮೃತರ ಮಗ ಪೊಲೀಸ್ ದೂರು ನೀಡಿದ್ದಾರೆ. ರೈಲು ಹಾಯ್ದ ಪರಿಣಾಮ ವ್ಯಕ್ತಿಯ ಅಂಗಾಂಗಗಳು ಛಿದ್ರ ಛಿದ್ರಗೊಂಡಿದ್ದು, ಮೃತ ದೇಹ ಪತ್ತೆಯಾದ ದಿನ ವ್ಯಕ್ತಿಯ ಗುರುತು ದೊರಕಿರಲಿಲ್ಲ.
ಪಿ.ಎಸ್.ಐ ಕುಮಾರ್ ಕಾಂಬಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ರೈಲ್ವೆ ಟ್ರಾಕ್ ನಲ್ಲಿ ಚದುರಿ ಬಿದ್ದ ಮೃತ ದೇಹದ ಅಂಗಾಗಗಳನ್ನು ಒಟ್ಟುಗೂಡಿಸಿದ್ದರು. ನಂತರ ಮೃತದೇಹದ ಅಂಗಾಂಗಗಳನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿತ್ತು.
ಈ ವೇಳೆ ರೈಲ್ವೆ ಪೋಲೀಸರು, ಸ್ಥಳೀಯ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು. ತಡರಾತ್ರಿ ಆದರೂ ಮನೆಗೆ ಬಾರದ ಯಜಮಾನನ ಹುಡುಕಾಟದಲ್ಲಿದ್ದ ಕುಟುಂಬಸ್ಥರು, ಮೃತದೇಹ ಪತ್ತೆಯಾದ ಸುದ್ದಿ ಕೇಳಿ ಗಾಬರಿಗೊಂಡಿದ್ದರು.ನಂತರ ಆತ ಧರಿಸಿದ್ದ ಬಟ್ಟೆ, ಪಾದರಕ್ಷೆ ಮತ್ತಿತರ ಆಧಾರದಲ್ಲಿ ಮೃತ ವ್ಯಕ್ತಿಯನ್ನು ಗುರುತಿಸಿದರು ಎನ್ನಲಾಗಿದೆ.