ನವದೆಹಲಿ: ಒಲಿಂಪಿಕ್ ಚಾಂಪಿಯನ್ ಭಾರತದ ನೀರಜ್ ಚೋಪ್ರಾ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಮಿತಿಯ ಪುರುಷರ ಜಾವೆಲಿನ್ ಥೋ ವಿಭಾಗದ ವಿಶ್ವ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ನಂ.1 ಸ್ಥಾನವನ್ನು ಅಲಂಕರಿಸಿವ ಮೂಲಕ ನೀರಜ್ ಚೋಪ್ರಾ ಮತ್ತೊಂದು ಐತಿಹಾಸಿಕ ಸಾಧನೆಯನ್ನು ಮುಡಿಗೇರಿಸಿಕೊಂಡಿದ್ದಾರೆ.
2020ರಲ್ಲಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ನ ಜಾವೆಲಿನ್ ಥೋ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಟ್ರ್ಯಾಕ್ ಆಂಡ್ ಫೀಲ್ಡ್ ಅಥ್ಲೆಟಿಕ್ಸ್ ವಿಭಾಗದಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊಟ್ಟಮೊದಲ ಅಥೀಟ್ ಎನಿಸಿಕೊಂಡಿದ್ದ ಚೋಪ್ರಾ ಈಗ ವಿಶ್ವ ಅಥ್ಲೆಟಿಕ್ಸ್‌ನ ಟ್ರ್ಯಾಕ್ ಆಂಡ್ ಫೀಲ್ಡ್ ವಿಭಾಗದ ವಿಶ್ವ ಶ್ರೇಯಾಂಕದಲ್ಲಿ ನಂ.1 ಎನಿಸಿಕೊಂಡ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಆಗಿರುವ ಗ್ರನೆಡಾದ ಆಂಡರ್ಸನ್ ಪೀಟರ್ಸ್ ಅವರನ್ನು ಕೆಳಗಿಳಿಸಿ ನೀರಜ್ ಚೋಪ್ರಾ ಅಗ್ರಸ್ಥಾನಕ್ಕೇರಿದ್ದಾರೆ.
ಭಾರತದ ನೀರಜ್ ಚೋಪ್ರಾ 1455 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಆಂಡರ್ಸನ್ ಪೀಟರ್ಸ್ 1433 ಅಂಕದೊಂದಿಗೆ 2ನೆ ಸ್ಥಾನಕ್ಕೆ ಕುಸಿದಿದ್ದಾರೆ. ಜೆಕ್ ಗಣರಾಜ್ಯದ ಮಾಜಿ ಒಲಿಂಪಿಕ್ ಚಾಂಪಿಯನ್ ಜಾಕುಬ್ ವಾಡ್ಲೆಚ್ 1416 ಅಂಕದೊಂದಿಗೆ ಮೂರನೇ ಸ್ಥಾನ, ಜರ್ಮನಿಯ ಜೂಲಿಯನ್ ವೆಬರ್ 1385 ಅಂಕದೊಂದಿಗೆ 4ನೇ ಸ್ಥಾನ, ಪಾಕಿಸ್ತಾನದ ಆರ್ಶದ್ ನದೀಮ್ 1306 ಅಂಕದೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ನೀರಜ್ ಮುಂದಿನ ಜೂನ್ 4 ರಂದು ನೆದರ್‌ಲ್ಯಾಂಡ್ಸ್‌ನ ಹೆಂಗೆಲೋದಲ್ಲಿ ನಡೆಯುವ ಫ್ಯಾನಿ ಬ್ಲಾಂಕರ್ಸ್-ಕೋಯೆನ್ ಗೇಮ್ಸ್ನಲ್ಲಿ ಭಾಗವಹಿಸಲಿದ್ದಾರೆ, ನಂತರ ಜೂನ್ 13 ರಂದು ಫಿನ್‌ಲ್ಯಾಂಡ್‌ನ ಟರ್ಕುದಲ್ಲಿ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ಭಾಗವಹಿಸಲಿದ್ದಾರೆ.