ಶಿರಸಿ: ಅಂಕೋಲಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಸಮಾವೇಶದ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಲೋಕಸಭಾ ಸಂಸದ ಅನಂತ ಕುಮಾರ ಹೆಗಡೆ ಗೈರಾಗಿರುವದರ ಹಿಂದೆ ಯಾವ ನಿಗೂಢ ಕಾರಣವಿದೆ? ಎಂದು ಕಾಂಗ್ರೆಸ್ ಪಕ್ಷದ ಕಿಸಾನ್ ರಾಜ್ಯ ಘಟಕದ ಕಾರ್ಯದರ್ಶಿ ಶ್ರೀಪಾದ ಹೆಗಡೆ ಕಡವೆ ಪ್ರಶ್ನಿಸಿದ್ದಾರೆ.
ಹಾಲಿ ಶಾಸಕರ ವೈಫಲ್ಯತೆಯ ಸಂದೇಶ ಹೊತ್ತಂತೆ ಸಮಾವೇಶದಲ್ಲಿ ಹಾಲಿ ಸಂಸದರ ಅನುಪಸ್ಥಿತಿ ಎದ್ದು ಕಾಣುತಿತ್ತು ಎಂದು ಕುಟುಕಿದ್ದಾರೆ. ಸಂಸದರು ಜಿಲ್ಲೆಯ ಬಿಜೆಪಿ ಶಾಸಕರುಗಳ ಮತ್ತು ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಅಭಿವೃದ್ಧಿ ವಿಚಾರದಲ್ಲಿ ತೋರಿದ ನಿಷ್ಕಾಳಜಿಗೆ ಬೇಸರಿಸಿ ಚುನಾವಣಾ ಪ್ರಚಾರ ಕಾರ್ಯದಿಂದ ದೂರ ಇದ್ದಾರೆ ಎಂಬುದು ಜಿಲ್ಲೆಯ ತುಂಬೆಲ್ಲ ಜನರಿಗೆ ಅರಿವಾಗಿರುವ ಸತ್ಯ ಸಂಗತಿ ಎಂದು ವ್ಯಂಗ್ಯವಾಡಿದ್ದಾರೆ.
ಸಂಸದರ ಗೈರು ಬಿಜೆಪಿಯ ಶಾಸಕರುಗಳ ವೈಫಲ್ಯತೆಗೆ ಮುಚ್ಚಿಡಲಾದ ಸಾಕ್ಷಿ ಒದಗಿಸಿದೆ ಎಂದು ಲೇವಡಿ ಮಾಡಿದ್ದಾರೆ.
ದೀರ್ಘ ಕಾಲದಿಂದ ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸಂಸದರು ತೋರುತ್ತಿರುವ ನಿರಾಸಕ್ತಿಯ ಹಿಂದಿರುವ ಸತ್ಯ ಸಂಗತಿಯನ್ನು ಬಿಜೆಪಿ ಪಕ್ಷವು ಜನರ ಮುಂದೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಿಲ್ಲೆಯ ಶಾಸಕರ ಪರವಾಗಿ ಮತ ಕೇಳಿ ಭಾಷಣ ಮಾಡುತ್ತಿದ್ದ ವೇದಿಕೆಯಿಂದಲೇ ಸ್ಥಳೀಯ ಸಂಸದರ ಅನುಪಸ್ಥಿತಿ ಜನರಿಗೆ ಈ ಚುನಾವಣೆಯಲ್ಲಿ ಹಾಲಿ ಬಿಜೆಪಿ ಶಾಸಕರನ್ನು ತಿರಸ್ಕರಿಸುವಂತೆ ಮತದಾರರಿಗೆ ಮೌನ ಸಂದೇಶ ರವಾನಿಸಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.