ಕುಮಟಾ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಲಾಗುವ ಅಭಿವೃದ್ಧಿ ಕಾಮಗಾರಿಯಲ್ಲಿ ಕೆಲಸ ಮಾಡುವ ಕೂಲಿಕಾರರ ಆರೋಗ್ಯದ ಹಿತದೃಷ್ಟಿಯಿಂದ ಕಾಮಗಾರಿ ಸ್ಥಳಗಳಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಕಾರದೊಂದಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುತ್ತಿದ್ದು, ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ನರೇಗಾ ಕೂಲಿಕಾರರು ಕೂಲಿ ಜೊತೆಗೆ ಉಚಿತವಾಗಿ ಆರೋಗ್ಯ ತಪಾಸಣಾ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ತಾಲೂಕು ಪಂಚಾಯತ್‌ನ ನರೇಗಾ ಸಹಾಯಕ ನಿರ್ದೇಶಕರಾದ ವಿನಾಯಕ ನಾಯ್ಕ ಅವರು ಹೇಳಿದರು.
ತಾಲೂಕಿನ ಗೋಕರ್ಣ ಹನೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾದಡಿ ಪ್ರಗತಿಯಲ್ಲಿರುವ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ ಪಂಚಾಯತ್, ಕುಮಟಾ ತಾಲೂಕು ಪಂಚಾಯತ್ ಹಾಗೂ ಹನೇಹಳ್ಳಿ ಗ್ರಾಮ ಪಂಚಾಯತ್, ಬಂಕಿಕೊಡ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಶನಿವಾರ ಜರುಗಿದ ರೋಜಗಾರ್ ದಿವಸ ಆಚರಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿದಿನ ನರೇಗಾದಡಿ ಶ್ರಮವಹಿಸಿ ಕೂಲಿ ಕೆಲಸ ಮಾಡುವ ಕೂಲಿಕಾರರು ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಬೇಸಿಗೆ ಬಿಸಿಲಿನ ಪ್ರಕರತೆ ಹೆಚ್ಚಿದ್ದು, ದೇಹದಲ್ಲಿ ನೀರಿನ ಅಮನಶ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೂಲಿಕಾರರು ಪದೇ ಪದೇ ನೀರನ್ನು ಕುಡಿಯುತ್ತಿರಬೇಕು. ಸಮಯಕ್ಕೆ ಆಹಾರ ಸೇವಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಜಿಲ್ಲಾ ಐಇಸಿ ಸಂಯೋಜಕರಾದ ಫಕೀರಪ್ಪ ತುಮ್ಮಣ್ಣನವರ ಮಾತನಾಡಿ, ನರೇಗಾ ಕೂಲಿಕಾರರಿಗೆ ಕಾಮಗಾರಿ ಸ್ಥಳದಲ್ಲಿ ಕಲ್ಪಿಸಲಾಗುವ ಕುಡಿಯುವ ನೀರು, ನೆರಳು, ಪ್ರಾಥಮಿಕ ಚುಕಿತ್ಸೆ, ಬೇಸಿಗೆ ಹಿನ್ನಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮಂತ್ರಾಲಯದಿಂದ ನರೇಗಾ ಕೆಲಸದಲ್ಲಿ ನೀಡಲಾದ ಶೇ 30ರಷ್ಟು ರಿಯಾಯಿತಿ ಹಾಗೂ ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನಿಂದ ಪ್ರಕಟಿಸಲಾದ ನರೇಗಾದಡಿ ಲಭ್ಯವಿರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಕುರಿತ ಮಾಹಿತಿ ಒಳಗೊಂಡ ಕರಪತ್ರಗಳನ್ನು ಕೂಲಿಕಾರರಿಗೆ ವಿವರಿಸಿದರು.
ನಂತರ ಜರುಗಿದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಂಕಿಕೊಡ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿಗಳಾದ ಪದ್ಮಾ ಹರಿಕಾಂತ ಅವರು ನರೇಗಾ ಕೂಲಿಕಾರರ ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ರಕ್ತ ತಪಾಸಣೆ ನಡೆಸಿದರು. ಜೊತೆಗೆ ಬಿಸಿಲಿನ ಹೆಚ್ಚಿನ ಪ್ರಕರತೆ ಹಿನ್ನಲೆಯಲ್ಲಿ ಎಲ್ಲಾ ಕೂಲಿಕಾರರಿಗೆ ಒಆರ್‌ಎಸ್ ವಿತರಿಸಿ ಆರೋಗ್ಯ ಸಮಸ್ಯಗಳು ಕಾಣಿಕೊಂಡರೆ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪರ್ಕಿಸಿ ಅಗತ್ಯ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಪವಿತ್ರಾ ತಾರ್ಕರ, ತಾಂತ್ರಿಕ ಸಂಯೋಜಕರಾದ ಲೋಕೇಶ ತಾರಿಮನೆ, ತಾಂತ್ರಿಕ ಸಹಾಯಕ ಇಂಜಿನಿಯರ್ ನವೀನ ಗುನಗಿ, ಆಶಾ ಕಾರ್ಯಕರ್ತೆ ನಾಗವೇಣಿ ನಾಯ್ಕ, ಬಿಎಫ್‌ಟಿ ವಿದ್ಯಾ ಗೌಡ, ಗ್ರಾಪಂ ಸಿಬ್ಬಂದಿ ನಿತ್ಯಾನಂದ ಗೌಡ, ಮಹೇಶ ಅಗೇರ ಸೇರಿದಂತೆ ಗ್ರಾಮಸ್ಥರು, ಕೂಲಿಕಾರರು ಉಪಸ್ಥಿತರಿದ್ದರು.