ಕಾರವಾರ: ಆಸ್ತಿಗೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಈರ್ವರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 5.85 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಅಂಕೋಲಾದ ಮಠಾಕೇರಿ ವಾರ್ಡ್ನ ಸುಬ್ರಾಯ್ ಪ್ರಭು ಪಿತ್ರಾರ್ಜಿತ ಆಸ್ತಿ ಪಾಲು ವಿಚಾರದಲ್ಲಿ ತಮ್ಮ ಅಮಿತ್, ತಾಯಿ ರುಕ್ಮಿಣಿಬಾಯಿ ಹಾಗೂ ಚಿಕ್ಕಪ್ಪ ಪದ್ಮನಾಭ ಪ್ರಭುವಿನೊಂದಿಗೆ ಜಗಳ ಮಾಡಿಕೊಂಡಿದ್ದ. ಆಸ್ತಿ ಪಾಲು ಮಾಡದೇ ಇರಲು ತಮ್ಮನ ಹೆಂಡತಿ ಮೇಧಾ (ಕಾಮಾಕ್ಷಿ) ಕಾರಣ ಎಂದು ಭಾವಿಸಿ 2019ರ ಜು.27ರಂದು ಬಂದೂಕು ಹಿಡಿದು ಆಕೆಯ ಮನೆಗೆ ಅಕ್ರಮವಾಗಿ ಪ್ರವೇಶಿಸಿದ್ದ.
ಮನೆಯಲ್ಲಿ ಮೇಧಾ ತನ್ನ ಮಗ ಅನೂಜನಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾಗ ಬಂದೂಕಿನಿಂದ ಗುಂಡು ಹಾರಿಸಿದ್ದು, ಆ ಗುಂಡು ಮಗನ ತಲೆಯನ್ನ ಸೀಳಿ ತಾಯಿಯ ತಲೆಯ ಭಾಗಕ್ಕೆ ಹೊಕ್ಕಿತ್ತು. ಅನೂಜ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮೇಧಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಳು. ಈ ಕುರಿತು ಭಾರತೀಯ ದಂಡ ಸಂಹಿತೆ ಕಲಂ 449, 450, 302 ಮತ್ತು ಕಲಂ 3 ಮತ್ತು 25 ಭಾರತೀಯ ಆಯುಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಪಿಎಸ್‌ಐ ಶ್ರೀಧರ್ ಎಸ್.ಆರ್., ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್, ಭಾರತೀಯ ದಂಡ ಸಂಹಿತೆ ಕಲಂ 302ರ ಅಡಿಯಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ, 5 ಲಕ್ಷ ದಂಡ ವಿಧಿಸಿದ್ದಾರೆ. ಜೊತೆಗೆ, ಕಲಂ 449 ಹಾಗೂ 450ಕ್ಕೆ ತಲಾ 10 ವರ್ಷ ಜೈಲು, 40 ಸಾವಿರ ದಂಡ, ಕಲಂ 25ಕ್ಕೆ 3 ವರ್ಷ ಜೈಲು ಹಾಗೂ 5 ಸಾವಿರ ದಂಡ, ಒಟ್ಟು 5.85 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ವಕೀಲ ರಾಜೇಶ್ ಮಳಗೀಕರ ವಾದಿಸಿದರೆ, ಮೃತ ಮೇಧಾಳ ಪತಿ ಅಮಿತ್ ಪರವಾಗಿ ವಕೀಲ ನಾಗರಾಜ ನಾಯಕ ವಕಾಲತ್ತು ವಹಿಸಿ, ಸರ್ಕಾರಕ್ಕೆ ಶಿಕ್ಷೆ ಕೊಡಿಸುವಲ್ಲಿ ನೆರವಾದರು.