ದಾಂಡೇಲಿ: ನಗರದಲ್ಲಿ ಬಿಡಾಡಿ ದನಕರುಗಳ ಸಂಖ್ಯೆ ದಿನದಿಮದ ದಿನಕ್ಕೆ ಏರಿಕೆಯಾಗತೊಡಗಿದ್ದು, ಸಾಕಷ್ಟು ಅನಾಹುತಗಳಿಗೆ ಕಾರಣವಾಗುತ್ತಿದೆ.
ನಗರದ ಕೆ.ಸಿ.ವೃತ್ತ, ಸೋಮಾನಿ ವೃತ್ತ, ಜೆ.ಎನ್.ರಸ್ತೆ, ಸಂಡೆ ಮಾರ್ಕೆಟ್, ಬರ್ಚಿ ರಸ್ತೆ, 14ನೇ ಬ್ಲಾಕ್ ಮೊದಲಾದ ಪ್ರಮುಖ ಪ್ರದೇಶಗಳ ರಸ್ತೆಗಳಲ್ಲಿ ಪ್ರತಿದಿನ ಹಿಂಡುಗಟ್ಟಲೆ ಬಿಡಾಡಿ ದನ ಕರುಗಳು ಅತ್ತಿಂದಿತ್ತ ಓಡಾಡುತ್ತಾ ಸುಗಮ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಕೊಡಲಾರಂಭಿಸಿದೆ. ಇಂತಹ ಸಂದರ್ಭಗಳಲ್ಲಿ ವಾಹನಗಳು ಅಪಘಾತವಾಗುವ ಸಾಧ್ಯತೆಯು ತೀರಾ ಹೆಚ್ಚಿದೆ. ಅಪಘಾತವಾಗುವ ಸಂದರ್ಭದಲ್ಲಿ ವಾಗಹನ ಸವಾರರಿಗೂ ತೊಂದರೆ, ಇತ್ತ ಬಿಡಾಡಿ ದನ ಕರುಗಳಿಗೂ ತೊಂದರೆಯಾಗಲಿದೆ.
ಈಗಾಗಲೆ ಸಾಕಷ್ಟು ಸಲ ಅಪಘಾತಕ್ಕೊಳಗಾಗಿ ಬಿಡಾಡಿ ದನ ಕರುಗಳು ಗಂಭೀರ ಗಾಯಗೊಂಡರೇ, ಇನ್ನೂ ಅನೇಕ ಬಾರಿ ಬಿಡಾಡಿ ದನ ಕರುಗಳು ಪ್ರಾಣ ಕಳೆದುಕೊಂಡಿವೆ. ಬಹಳಷ್ಟು ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡಿರುವ ಉದಾಹರಣೆಯಿದೆ. ಇದೇ ಬಿಡಾಡಿ ದನ ಕರುಗಳು ನಗರದ ಹಲವು ಕಡೆಗಳಲ್ಲಿ ಆಟೋ ರಿಕ್ಷಾಗಳಿಗೆ ಹಾಗೂ ನಿಲ್ಲಿಸಿಟ್ಟಿರುವ ದ್ವಿಚಕ್ರ ವಾಹನಗಳಿಗೆ ಹಾನಿ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ. ಪ್ರವಾಸೋದ್ಯಮವಾಗಿ ಬೆಳೆಯುತ್ತಿರುವ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಬಿಡಾಡಿ ದನ ಕರುಗಳ ಕಾಟದಿಂದಾಗಿ ಅವರಿಗೂ ತೊಂದರೆಯಾಗತೊಡಗಿದೆ.
ಈ ನಿಟ್ಟಿನಲ್ಲಿ ಬಿಡಾಡಿ ದನ ಕರುಗಳ ನಿಯಂತ್ರಣಕ್ಕೆ ನಗರ ಸಭೆ ಹಾಗೂ ಸಂಬAಧಪಟ್ಟ ಇಲಾಖೆಗಳು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಹಾಗೂ ದನ ಕರುಗಳನ್ನು ಸಾಕುವವರು ರಸ್ತೆಗೆ ಬಿಡದೇ ಕಟ್ಟಿ ಸಾಕಬೇಕೆಂದು ನಗರದ ಸಮಾಜ ಸೇವಕರಾದ ಚಂದ್ರು ಶೆಟ್ಟಿಯವರು ಮನವಿ ಮಾಡಿದ್ದಾರೆ.