ಭಟ್ಕಳ: ಪ್ರಕೃತಿಯಲ್ಲಿ ಲಭ್ಯವಿರುವ ನೀರು, ಖನಿಜ, ವಿದ್ಯುತ್ ಶಕ್ತಿ, ಆಹಾರ ಅಮೂಲ್ಯ ಸಂಪತ್ತಾಗಿದ್ದು, ಇವುಗಳನ್ನು ವ್ಯರ್ಥ ಮಾಡಬಾರದು ಎಂದು ಪದ್ಮಶ್ರೀ ಡಾ.ಕಿರಣ್ ಸೇಠ್ ಹೇಳಿದರು.
ಅವರು ಪರಿಸರ ಹಾಗು ಸಾಂಸ್ಕ್ರತಿಕ ಕಲೆಗಳ ಉಳಿವಿಗಾಗಿ ಕೇರಳದಿಂದ ಗೋವಾದತ್ತ ಸಾಗುತ್ತಿರುವ ಸೈಕಲ್ ಯಾತ್ರೆಯ ಅಂಗವಾಗಿ ತಾಲೂಕಿನ ಶ್ರೀಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದಲ್ಲಿ ರೋಟರಿ ಮತ್ತು ರೋಟರಾಕ್ಟ್ ಕ್ಲಬ್ ಸಹಭಾಗಿತ್ವದಲ್ಲಿ ಆಯೋಜಿಸಲ್ಪಟ್ಟ ಸ್ಪಿಕ್-ಮೆಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಉದಾರೀಕರಣ, ಜಾಗತೀಕರಣ ಹಾಗೂ ಖಾಸಗೀಕರಣದ ಈ ಯುಗದಲ್ಲಿ ನಾವು ಬಹುಮಹಡಿ ಕಟ್ಟಡ ಕಟ್ಟುವಲ್ಲಿ ಪರಿಣತಿ ಸಾಧಿಸಿದ್ದೇವೆ ಆದರೆ ನಮ್ಮೊಳಗಿನ ಅಂತಃಸತ್ವ ಕಟ್ಟುವಿಕೆಯಲ್ಲಿ ವಿಫಲರಾಗಿದ್ದೇವೆ, ಪ್ರಕೃತಿ ಹಾಗೂ ಭಾರತೀಯ ಪರಂಪರೆಯ ಉಳಿವಿಗಾಗಿ ಪ್ರತಿಯೊಬ್ಬ ನಾಗರಿಕನು ಶ್ರಮವಹಿಸುವ ಅಗತ್ಯವಿದೆ ಎಂದರು.
ಸ್ಪಿಕ್ ಮಕೆ ಸಮಾವೇಶದ ಸಂಯೋಜಕಿ ಸುಪ್ರೀತಿ, ನಾಗಪುರದಲ್ಲಿ ಜರುಗಲಿರುವ ರಾಷ್ಟ್ರೀಯ ಮಟ್ಟದ ಸ್ಪಿಕ್ ಮಕೆ ಸಮಾವೇಶದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಕೆರೆಮನೆ ಶಿವರಾಮ ಹೆಗಡೆ ಯಕ್ಷಗಾನ ತರಬೇತಿ ಕೇಂದ್ರದ ಅಧ್ಯಕ್ಷ ಶಿವಾನಂದ ಹೆಗಡೆ, ಸಾಂಸ್ಕ್ರತಿಕ ಕಲೆಗಳ ರಕ್ಷಣೆಯಲ್ಲಿ ಸ್ಪಿಕ್ ಮೆಕೆಯ ಪಾತ್ರವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಶ್ರೀನಿವಾಸ್ ಪಡಿಯಾರ ಪದ್ಮಶ್ರೀ ಡಾ. ಕಿರಣ್ ಸೇಠ್‌ರವರ ಸಾಧನೆಯನ್ನು ಹೊಗಳಿದರು. ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್ ಪೈ, ಉಪಪ್ರಾಂಶುಪಾಲ ವಿಶ್ವನಾಥ್ ಭಟ್, ರೋಟರಾಕ್ಟ್ ಕ್ಲಬ್ ಸಂಯೋಜಕ ದೇವೇಂದ್ರ ಕಿಣಿ, ಝೇಂಕಾರ್ ಆರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರಸನ್ನ ಪ್ರಭು, ವಿದೂಶಿ ನಯನ ಪ್ರಸನ್ನ, ತಾಲೂಕಿನ ಕಲಾವಿದರು ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು. ರೋಟರಾಕ್ಟ್ ಸದಸ್ಯರುಗಳಾದ ವೈಷ್ಣವಿ ನಾಯ್ಕ ಸ್ವಾಗತಿಸಿದರು, ಹರ್ಷಿತ ಜೈನ ಹಾಗೂ ವಂದನಾ ಜೈನ ನಿರೂಪಿಸಿದರು, ಮತ್ತು ಜಾಹ್ನವಿ ನಾಯ್ಕ ವಂದಿಸಿದರು.