ಹಳಿಯಾಳ: ಈ ಬಾರಿಯ ಹಳಿಯಾಳ ವಿಧಾನಸಭಾ ಕ್ಷೇತ್ರದ ಚುನಾವಣೆ ಸಾಕಷ್ಟು ರಂಗೇರಿದೆ. ಇನ್ನು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿರುವ ಎಸ್.ಎಲ್.ಘೋಟ್ನೇಕರ್ ಒಂದೊಮ್ಮೆ ನಾಮಪತ್ರ ತಿರಸ್ಕಾರವಾದರೆ ಎಂದು ತಮ್ಮ ಮಗನನ್ನ ಕಣಕ್ಕೆ ಇಳಿಸುವ ಮೂಲಕ ಎಚ್ಚರಿಕೆ ವಹಿಸಿದ್ದಾರೆ ಎನ್ನಲಾಗಿದೆ.
ರಾಜ್ಯ ವಿಧಾನಸಭಾ ಚುಣಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ಇನ್ನು ಜಿಲ್ಲೆಯಲ್ಲಿ ಈ ಬಾರಿ ಹಳಿಯಾಳ ಕ್ಷೇತ್ರ ಸಾಕಷ್ಟು ಗಮನ ಸೆಳೆದಿದೆ. ಕ್ಷೇತ್ರದಲ್ಲಿ ಈ ಬಾರಿ ಹಾಲಿ ಸಚಿವ ದೇಶಪಾಂಡೆ ಕಣಕ್ಕೆ ಕಾಂಗ್ರೆಸ್ ಪಕ್ಷದಿಂದ ಇಳಿದಿದ್ದರೇ, ಇನ್ನೊಂದೆಡೆ ಜೆಡಿಎಸ್ ನಿಂದ ಅವರದ್ದೇ ಅಖಾಡದಲ್ಲಿ ಪಳಗಿದ್ದ ಎಸ್ ಎಲ್ ಘೋಟ್ನೇಕರ್ ಇಳಿದಿದ್ದಾರೆ. ಇನ್ನು ಈ ಇಬ್ಬರು ನಾಯಕರಿಗೆ ಟಕ್ಕರ್ ಕೊಡಲು ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಸಹ ಪ್ರಯತ್ನಕ್ಕೆ ಇಳಿದಿದ್ದಾರೆ. ಪ್ರತಿ ಬಾರಿ ಇಬ್ಬರು ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಕ್ಷೇತ್ರದಲ್ಲಿ ನಡೆಯುತ್ತಿತ್ತು. ಆದರೆ ಈ ಬಾರಿ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಕ್ಷೇತ್ರದಲ್ಲಿ ಯಾರು ಗೆಲುವನ್ನ ಪಡೆಯುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಮೂಡಿದೆ. ಇದರ ನಡುವೆ ಜೆಡಿಎಸ್ ಅಭ್ಯರ್ಥಿಯಾಗಿ ಎಸ್.ಎಲ್.ಘೋಟ್ನೇಕರ್ ಅವರ ಪುತ್ರ ಶ್ರೀನಿವಾಸ್ ಘೋಟ್ನೇಕರ್ ಸಹ ನಾಮಪತ್ರ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ.
ಕ್ಷೇತ್ರದಲ್ಲಿ ಗುರುವಾರ ಬೃಹತ್ ಮೆರವಣಿಗೆ ಮೂಲಕ ಎಸ್ ಎಲ್ ಘೋಟ್ನೇಕರ್ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇದರ ನಡುವೆಯೇ ಘೋಟ್ನೇಕರ್ ಮಗ ಶ್ರೀನಿವಾಸ್ ಘೋಟ್ನೇಕರ್ ಸಹ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎರಡು ನಾಮಪತ್ರಗಳನ್ನ ಸಲ್ಲಿಸಿದ್ದಾರೆ. ಈ ಬಾರಿ ರಾಜಕೀಯ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದು ಘೋಟ್ನೇಕರ್ ಕ್ಷೇತ್ರದ ಚುನಾವಣೆಯನ್ನ ಸಾಕಷ್ಟು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ. ಘೋಟ್ನೇಕರ್ ವಿಧಾನಸಭಾ ಚುನಾವಣೆಯ ಅಖಾಡಕ್ಕೆ ಇಳಿದ ನಂತರ ಅವರ ಮೇಲಿನ ದೂರುಗಳು ಸದ್ದು ಮಾಡಿತ್ತು. ಬಿಸಿಎಂ ಇಲಾಖೆಯ ಅನುಧಾನ ದುರ್ಬಳಕೆ ಆರೋಪ ಲೋಕಾಯುಕ್ತ ತನಿಖೆಯಲ್ಲಿ ತಪ್ಪಿತಸ್ಥ ಎನ್ನಲಾಗಿತ್ತು. ಈ ಎಲ್ಲಾ ಪ್ರಕರಣಗಳು ಸಾಕಷ್ಟು ಘೋಟ್ನೇಕರ್ ಅವರಿಗೆ ಆತಂಕ ಸೃಷ್ಟಿ ಮಾಡಿದೆ ಎನ್ನಲಾಗಿದೆ. ಒಂದೊಮ್ಮೆ ತನ್ನ ನಾಮಪತ್ರ ತಿರಸ್ಕಾರ ಮಾಡಿದರೆ ಮಗನನ್ನಾದರು ಕಣದಲ್ಲಿ ಉಳಿಯುವಂತೆ ಮಾಡಲು ಎರಡು ನಾಮಪತ್ರ ಸಲ್ಲಿಕೆ ಮಾಡಲಾಗಿದೆ ಎನ್ನಲಾಗಿದೆ.