ಯಲ್ಲಾಪುರ: ಬಡಜನರ ದಿನ ನಿತ್ಯದ ಹಾಗೂ ಅಗತ್ಯದ ಅವಶ್ಯಕತೆಗಳಾದ ಅಡಿಗೆ ಅನಿಲದ ಸಿಲೆಂಡರ್, ಪೆಟ್ರೋಲ್, ಹಾಲು, ದವಸ ಧಾನ್ಯಗಳು, ದಿನಬಳಕೆ ವಸ್ತುಗಳು ಸೇರಿದಂತೆ ಹಲವಾರು ಸಾಮಾಗ್ರಿಗಳ ಬೆಲೆ ಏರಿಕೆಯಿಂದಾಗಿ ಬೇಸತ್ತು ನಾನು ಬಡಜನರ ಪರವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದೇನೆ ಎಂದು ಮಾಜಿ ಶಾಸಕ, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಹೇಳಿದರು.
ಅವರು ಶಾರದಾಗಲ್ಲಿಯಲ್ಲಿ ಅನ್ಯ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯಕರ್ತರನ್ನು ಪಕ್ಷಕ್ಕೆ ಸ್ವಾಗತಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಮನೆ ಇಲ್ಲ ಎಂದು ಬಹಳಷ್ಟು ಜನ ದೂರಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಅವಕಾಶ ವಂಚಿತ ಎಲ್ಲಾ ಫಲಾನುಭವಿಗಳು ಮನೆ ಹಾಗೂ ಇನ್ನಿತರ ಸೌಲಭ್ಯ ಕೊಡುವ ಕೆಲಸ ಮಾಡುತ್ತೆನೆ ಎಂದು ಹೇಳಿದರು.
ಶಾಸಕನಾಗಿ ನಾನು ಆಸ್ತಿ ಮಾಡಿಲ್ಲ. ನನಗೆ ದೊಡ್ಡ ವಾಹನಗಳಿಲ್ಲ. ಫ್ಯಾಕ್ಟರಿಗಳನ್ನು ಹೊಂದಿಲ್ಲ. ನನಗಾಗಿ ನಾನು ಏನನ್ನು ಮಾಡಿಕೊಂಡಿಲ್ಲ. ನಮ್ಮ ಅಜ್ಜನ ಮೂಲದಿಂದ ಬಂದ ಆಸ್ತಿಯನ್ನೇ ನನ್ನ ಬದುಕಿನ ಆಧಾರವಾಗಿದೆ. ನಾನು ಶಾಸಕನಾಗಿ ಆಯ್ಕೆಯಾದರೆ ಜನರಿಗೆ ಉದ್ಯೋಗ ಒದಗಿಸುವ ಕಾರ್ಯ ಮೊದಲು ಮಾಡುತ್ತೇನೆ. ಬಿಜೆಪಿ ಆಡಳಿತ ಹಾಗೂ ಪ್ರತಿನಿಧಿಗಳು ಜನರಿಗೆ ಮರಳು ಮಾಡುತ್ತಿದ್ದಾರೆ. ನಾನು ಬಿಜೆಪಿಯಲ್ಲಿದ್ದಾಗ ಇದನ್ನು ಗಮನಿಸಿದ್ದೇನೆ. ಬೇರೆ ಪಕ್ಷದವರು ಹಣ ಕೊಟ್ಟರೇ ಪಡೆದುಕೊಳ್ಳಿ ಆದರೇ, ಸಮಗ್ರ ಸುಭದ್ರ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷ ಹಾಗೂ ನನಗೆ ಮತ ನೀಡಿ ಎಂದು ಪಾಟೀಲ್ ಹೇಳಿದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರವಿಚಂದ್ರ ನಾಯ್ಕ ಮಾತನಾಡಿ, ಪಟ್ಟಣ ಪಂಚಾಯಿತಿಯಲ್ಲಿ ಆಗ ಶಾಸಕರಾಗಿದ್ದ ವಿ.ಎಸ್. ಪಾಟೀಲ್ ಯಾವುದೇ ತಾರತಮ್ಯ ಮಾಡಿಲ್ಲ. ಬಂದಿರುವ ಹಣದಲ್ಲಿ ವಾರ್ಡ್ಗಳಿಗೆ ಸರಿ ಸಮಾನವಾಗಿ ಹಂಚಿದ್ದರು. ನಾನು ವಿಎಸ್ ಪಾಟೀಲ್ ಮೇಲೆ ವಿಶ್ವಾಸ ಇಟ್ಟಿದ್ದೇನೆ ಹಾಗೆ ನನ್ನ ವಾರ್ಡಿನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದು ಹೇಳಿದರು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್ ಕೆ ಭಟ್ ಮುಣಸುಪಾಲ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ ಮಾತನಾಡಿದರು. ಪಟ್ಟಣ ಪಂಚಾಯತ ಸದಸ್ಯರಾದ ಸಯ್ಯದ್ ಕೇಸರ್ ಅಲಿ, ನರ್ಮದಾ ನಾಯ್ಕ, ತಾಲೂಕಾ ನಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪೂಜಾ ನೇತ್ರೇಕರ, ಹಿಂದುಳಿದ ವರ್ಗದ ಜಿಲ್ಲಾ ಉಪಾಧ್ಯಕ್ಷ ರವಿ ನಾಯ್ಕ ಇಂಜಿನಿಯರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸರಸ್ವತಿ ಗುನಗಾ, ತಾಲೂಕಾ ಅಲ್ಪಸಂಖ್ಯಾತರ ಅಧ್ಯಕ್ಷ ಫೈರೋಜ್ ಶೇಖ, ಮಹಮ್ಮದ್, ನಿಸ್ಸಾರ್ ಪಟೇಲ್, ಪ್ರಕಾಶ ಜಡ್ಡಿ ಮುಂತಾದವರು ಇದ್ದರು. ಇದೇ ಸಂದರ್ಭದಲ್ಲಿ ಅನ್ಯ ಪಕ್ಷದ ಹತ್ತಕ್ಕೂ ಹೆಚ್ಚು ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ವಿ.ಎಸ್.ಪಾಟೀಲರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.