ಅಂಕೋಲಾ: ತರಗತಿಯಲ್ಲಿ ಕಲಿತ ವಿಷಯಗಳ ಜೊತೆ ಪರಿಸರದ ಮೂಲಕ ಇರುವ ಕಲಿಕಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಾಯೋಗಿಕ ಪ್ರಾಥಮಿಕ ಶಾಲೆಯ ಮುಖ್ಯೋಧ್ಯಾಪಕ ನಾಗರಾಜ ಸರೂರ ಹೇಳಿದರು.
ಅವರು ಕೆ.ಎಲ್.ಇ. ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯ ಕರ್ನಾಟಕ ವಿಶ್ವ್ವವಿದ್ಯಾಲಯ ಧಾರವಾಡ ಎನ್.ಎಸ್.ಎಸ್.ಕೋಶ, ಜಿಲ್ಲಾ, ತಾಲೂಕಾ ಹಾಗೂ ಗ್ರಾಮ ಪಂಚಾಯತದ ಸಹಯೋಗದಲ್ಲಿ ನಡೆದ ಎನ್.ಎಸ್.ಎಸ್. ಶಿಬಿರವನ್ನು ಗಿಡಕ್ಕೆ ನೀರನ್ನು ಹಾಕುವದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಎನ್.ಎಸ್.ಎಸ್. ಸೇವಾಮನೋಭಾವನೆಯನ್ನು ಬಿತ್ತರಿಸುವ ಯೋಜನೆ ಆಗಿದ್ದು, ಆ ಮೂಲಕ ಸೇವಾ ಮನೋಭಾವನೆಯನ್ನು ಬೆಳಸಿಕೊಂಡು ನೆರಳು ಬಿಸಿಲು ಎರಡರ ಅನುಭವ ಪಡೆದುಕೊಂಡು ಉತ್ತಮ ಭವಿಷ್ಯರೂಪಿಸಿಕೊಳ್ಳಬೇಕು. ಶಿಕ್ಷಕರ ಜವಾಬ್ದಾರಿ ಬೋಧಿಸುವದಾದರೆ ಅದನ್ನು ಭವಿಷ್ಯಕ್ಕೆ ಬಳಸಿಕೊಳ್ಳುವದು ವಿದ್ಯಾರ್ಥಿಗಳ ಜವಾಬ್ದಾರಿ ಆಗಿದೆ. ಪ್ರತಿ ವಿದ್ಯಾರ್ಥಿ 20 ವರ್ಷ ಕಷ್ಟಪಟ್ಟು ಓದಿದರೆ ಮುಂದಿನ 80 ವರ್ಷದ ಜೀವನವನ್ನು ಸುಖವಾಗಿ ಕಳೆಯಬಹುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಜಿ.ಹೆಗಡೆ, ಎನ್.ಎಸ್.ಎಸ್. ಧ್ಯೇಯಯನ್ನು ಪಾಲಿಸಿ ಉತ್ತಮ ಕೌಶಲ್ಯ ಬೆಳೆಸಿಕೊಂಡು ಮುಂದಿನ ಜನಾಂಗಕ್ಕೆ ಕೊಡುಗೆ ನೀಡುವಲ್ಲಿ ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ರಕ್ಷಾ ಸಂಗಡಿಗರು ಪ್ರಾರ್ಥಿಸಿದರು, ಸುಪ್ರಿಯಾ ನಾಯ್ಕ ಸ್ವಾಗತಿಸಿದರು ಜಯಲಕ್ಷ್ಮಿ ಹರಿಕಂತ್ರ ವಂದಿಸಿದರು. ವಿದ್ಯಾ ಆಚಾರಿ ನಿರೂಪಿಸಿದರು.