ಕಾರವಾರ: ಚುನಾವಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಅಡ್ಡಿ ಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣದ ಮೂಲಕ ಕೋಮು ಸೌಹಾರ್ದತೆಗೆ ಅಡ್ಡಿ ಮಾಡಿದರೂ ಕ್ರಮ ತಪ್ಪಲ್ಲ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕಕುಮಾರ್ ಎಚ್ಚರಿಕೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಗೆ ಅಡ್ಡಿ ಮಾಡಿದ್ದಲ್ಲಿ ಸರಿಯಾದ ಕ್ರಮ ಕೈಗೊಳ್ಳುತ್ತೇವೆ. ಇಂತಹ ಕೃತ್ಯಗಳಿಗೆ ಯಾವುದೇ ಕಾರಣಕ್ಕೂ ಆಸ್ಪದ ಇಲ್ಲ. ಇಂತಹ ಸಂದರ್ಭದಲ್ಲಿ ಕೋಮುಸೌಹಾರ್ದತೆ ಕೆಡಿಸಲು ಮುಂದಾದರೆ ಪೊಲೀಸ್ ಇಲಾಖೆ ಸರಿಯಾದ ಕ್ರಮ ಕೈಗೊಳ್ಳಲಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಜವಾಬ್ದಾರಿ, ಯಾವ ಕಾರಣಕ್ಕೂ ಮುಲಾಜಿಲ್ಲದೇ ಕ್ರಮ ಜರುಗಿಸುತ್ತೇವೆ. ಎಲ್ಲರ ಮೇಲೆ ನಿಗಾ ಇರಿಸಿದ್ದು, ಯಾರೇ ಅತಿರೇಖವಾಗಿ ವರ್ತಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಈಗಾಗಲೇ ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್ನ 4 ಕಾಯ್ಗಳು ಜಿಲ್ಲೆಗೆ ಬಂದಿದ್ದು, ಎರಡನೇ ಹಂತದಲ್ಲಿ ಚುನಾವಣೆ ಹತ್ತಿರ ಬಂದಾಗ ಸಿಆರ್ಪಿಎಫ್ನ ಮತ್ತಷ್ಟು ಕಾಯ್ಗಳು ಜಿಲ್ಲೆಗೆ ಬರಲಿವೆ. ಸೂಕ್ಷ್ಮ ಮತಗಟ್ಟೆ ಪ್ರದೇಶಗಳು ಹಾಗೂ ಚೆಕ್ಪೋಸ್ಟ್ಗಳಲ್ಲಿ ಪೊಲೀಸ್ ಜತೆ ಸಿಆರ್ಪಿಎಫ್ ನಿಯೋಜನೆ ಮಾಡಲಾಗುವುದು. ಜಿಲ್ಲೆಯ 280 ಮತಗಟ್ಟೆಗಳಲ್ಲಿ ಸಿಎಪಿಎಫ್ ಹಾಗೂ ಸಿಆರ್ಪಿಎಫ್ ನಿಯೋಜನೆ ಮಾಡಲಾಗುವುದು ಎಂದರು. ರೌಡಿಗಳ ಮೇಲೆ ಮತ್ತು ದಬ್ಬಾಳಿಕೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಸುಮಾರು 31 ರೌಡಿ ಶೀಟರ್ಗಳನ್ನು ಚುನಾವಣೆ ಸಂದರ್ಭ ಗಡಿಪಾರು ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ವಿಚಾರಣೆ ಬಳಿಕ ಗಡಿಪಾರು ಆದೇಶ ಜಾರಿಯಾಗಲಿದೆ. ಗಡಿಪಾರು ಆದವರು ಯಾವ ಜಿಲ್ಲೆಗೆ ಸೂಚಿಸುತ್ತಾರೋ ಅಲ್ಲಿಗೆ ತೆರಳಬೇಕು ಎಂದರು.
ಜಿಲ್ಲೆಯ ಚೆಕ್ಪೋಸ್ಟ್ಗಳಲ್ಲಿ ಈಗಾಗಲೇ ಬಿಗಿ ಬಂದೋಬಸ್ತ್ ನಡೆಸಲಾಗಿದ್ದು, ತೀವ್ರ ತಪಾಸಣೆ ನಡೆಯುತ್ತಿದೆ. ಎಲೆಕ್ಷನ್ ಕಮಿಷನ್ನ ನಿಯಮದಂತೆ ಕ್ಯಾಶ್, ಲಿಕ್ಕರ್, ಫ್ರೀಭೀಸ್, ಮೌಲ್ಯಯುತ ವಸ್ತುಗಳ ಮೇಲೆ ನಿಗಾ ಇರಿಸಿದ್ದೇವೆ. ಇವುಗಳ ಜತೆ ದನಗಳ ಮಾಂಸ ಸಾಗಾಟವನ್ನು ಕೂಡಾ ತಡೆ ಹಿಡಿಯಲಾಗುತ್ತದೆ ಎಂದ ಅವರು, ಗಾಂಜಾ ಸಾಗಾಟದ ವಿರುದ್ಧವೂ ನಿಗಾ ಇರಿಸಲಾಗಿದೆ. ಸಾರ್ವಜನಿಕರು ಮಾಹಿತಿ ಇದ್ದಲ್ಲಿ ಪೊಲೀಸರಿಗೆ ತಿಳಿಸಿ ಎಂದು ಕೋರಿದರು.