ಸಿದ್ದಾಪುರ: ಸಮಾಜದ ಪ್ರತಿಯೊಬ್ಬರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸಮಾಜವು ಅಭಿವೃದ್ಧಿ ಕಾಣಲು ಸಾಧ್ಯ ಎಂದು ತಾಲೂಕು ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷ ಸುರೇಶ್ ಮೇಸ್ತ ಹೇಳಿದರು.
ಅವರು ಪಟ್ಟಣದ ಹೊಸೂರಿನ ಕೊಂಕಣಿ ಖಾರ್ವಿ ಸಮಾಜದ ಕಾರ್ಯಾಲಯದಲ್ಲಿ ಸಮಾಜದ ಹಿರಿಯ ಸದಸ್ಯರಿಗೆ, ನಿವೃತ್ತ ಶಿಕ್ಷಕರಿಗೆ ಹಾಗೂ ನಿವೃತ್ತ ಯೋಧರಿಗೆ ಸನ್ಮಾನಿಸಿ ಬಳಿಕ ಮಾತನಾಡಿದರು. ಸಮಾಜದ ಏಳಿಗೆಗಾಗಿ ತಮ್ಮ ಜೀವನದ ಬಹುತೇಕ ಸಮಯವನ್ನು ನೀಡಿದ ಸಮಾಜದ ಹಿರಿಯ ಸದಸ್ಯರಿಗೆ, ಶಿಕ್ಷಕರಿಗೆ, ಯೋಧರಿಗೆ, ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನ ಮಾಡುವುದು ಸಮಾಜದ ಕರ್ತವ್ಯ ಎಂದು ಅವರು ಹೇಳಿದರು.
ಬಳಿಕ ನಿವೃತ್ತ ಶಿಕ್ಷಕಿ ಲಲಿತಾ ಮೇಸ್ತ ಮಾತನಾಡಿ, ಕೊಂಕಣಿ ಖಾರ್ವಿ ಸಂಘವು, ಸಮಾಜದ ಸದಸ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಹಿಂದಿನಿಂದಲೂ ಉತ್ತಮ ಕೆಲಸವನ್ನು ಮಾಡುತ್ತಾ ಬಂದಿದ್ದು, ಕೆಲವೊಮ್ಮೆ ಸಂಘದ ಪದಾಧಿಕಾರಿಗಳು ತಪ್ಪು ಮಾಡಿದಾಗ ಅದನ್ನು ಒಮ್ಮೊಮ್ಮೆ ಖಂಡಿಸಿದ್ದೇನೆ ಅದೇ ನನ್ನ ಸ್ವಭಾವ. ಶಿಕ್ಷಕ ವೃತ್ತಿಯೇ ಅಂಥದ್ದು, ಶಿಕ್ಷಕಿಯಾಗಿ ನಾನು ವಿದ್ಯಾರ್ಥಿಗಳನ್ನು ಜಾಣರು ಅಥವಾ ದಡ್ಡರು ಎಂದು ವಿಂಗಡಿಸದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ. ಶಿಕ್ಷಕ ವೃತ್ತಿಯ ತೃಪ್ತಿ ನನಗಿದೆ. ಶಿಕ್ಷಕಿಯಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಹೇಳಿದರು.
ಸಮಾಜದ ವತಿಯಿಂದ ಸಂಘದ ಹಿರಿಯ ಸದಸ್ಯರಾದ ಪಾಂಡುರಂಗ ಮೇಸ್ತ, ಲಕ್ಷ್ಮಣ ಪಾಲೇಕರ, ನಿವೃತ್ತ ಶಿಕ್ಷಕಿ ಲಲಿತಾ ಮೇಸ್ತ, ನಿವೃತ್ತ ಯೋಧ ಹಾಗೂ ಸಂಘದ ಉಪಾಧ್ಯಕ್ಷ ಗಣಪತಿ ಮೇಸ್ತ ಹಾಗೂ ನಾಗರಾಜ್ ಮೇಸ್ತ, ಧನಂಜಯ ಮೇಸ್ತ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ವಸಂತ ಮೇಸ್ತ, ಪ್ರಮುಖರಾದ ದತ್ತಾತ್ರೇಯ ಮೇಸ್ತ, ಎಂ.ಡಿ.ಮೇಸ್ತ, ಉಮೇಶ್ ಮೇಸ್ತ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಮೇಸ್ತ ಸ್ವಾಗತಿಸಿ, ನಿರೂಪಿಸಿದರು. ಭಾಗೀರಥಿ ಮೇಸ್ತ ವಂದಿಸಿದರು.