ಕಾರವಾರ: ನಗರಸಭೆ ಒಡೆತನದಲ್ಲಿರುವ ಗಾಂಧಿ ಮಾರುಕಟ್ಟೆಯನ್ನು ಕೆಡವಿ ಅದೇ ಜಾಗದಲ್ಲಿ ನೂತನವಾಗಿ ಬೃಹತ್ ಮಳಿಗೆ ಸಂಕೀರ್ಣವನ್ನು ನಿರ್ಮಿಸಲು ನಿರ್ಣಯಿಸಲಾಗಿರುವ ಕಾರಣ ಹಳೆಯ ಅಂಗಡಿಕಾರರಿಗೆ ಅಂಗಡಿಯನ್ನು ಕಾಯ್ದಿರಿಸುವ ಬಗ್ಗೆ ಸಾಂಕೇತಿಕವಾಗಿ ಒಪ್ಪಂದ ಪತ್ರ ವಿತರಣೆ ಮಾಡಲಾಗಿದೆ.
1956ರಲ್ಲಿ ನಿರ್ಮಿಸಿದ್ದ ಗಾಂಧಿ ಮಾರುಕಟ್ಟೆಯು ತೀರಾ ಜೀರ್ಣವಸ್ಥೆಯಲ್ಲಿದ್ದು, ಲೋಕೋಪಯೋಗಿ ಇಲಾಖೆಯು ಬಳಕೆಗೆ ಯೋಗ್ಯವಲ್ಲವೆಂದು ತಿಳಿಸಿದೆ. ಹೀಗಾಗಿ ಇದನ್ನು ಕೆಡವಿ ಅದೇ ಜಾಗದಲ್ಲಿ ನೂತನವಾಗಿ ಬೃಹತ್ ಮಳಿಗೆ ಸಂಕೀರ್ಣವನ್ನು ನಿರ್ಮಿಸಲು ನಿರ್ಣಯಿಸಲಾಗಿದ್ದು, ಈ ಮಾರುಕಟ್ಟೆಯಲ್ಲಿ ಈ ಹಿಂದಿನಿಂದ ಬಾಡಿಗೆನಾತೆಯಿಂದ ಇರುವವರಿಗೆ ಪುನರ್ವಸತಿ ಕಲ್ಪಿಸುವ ಹಿತದೃಷ್ಟಿಯಿಂದ ಮಳಿಗೆ ಸಂಕೀರ್ಣ ನಿರ್ಮಾಣವಾದ ನಂತರ ನಗರಸಭೆಗೆ ಸಂದಾಯ ಮಾಡಲು ಬಾಕಿ ಇರುವ ಮೊತ್ತವನ್ನು ಪೂರ್ಣವಾಗಿ ಪಾವತಿಸಿದ್ದಲ್ಲಿ ಅಂಥವರಿಗೆ ಒಂದು ಮಳಿಗೆ ಕಾಯ್ದಿರಿಸಲು ಕೂಡಾ ನಗರಸಭೆಯ ಸದಸ್ಯರ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಅದರಂತೆ ಹೆಚ್ಚಿನ ಅಂಗಡಿಕಾರರು ಮಳಿಗೆ ಖಾಲಿ ಪಡಿಸಿ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿದ್ದು, ಇನ್ನೂ ಕೆಲವು ಅಂಗಡಿಕಾರರು ಖಾಲಿಪಡಿಸಿದೇ ನ್ಯಾಯಾಲಯಕ್ಕೆ ಹೋಗಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಈ ಬಗ್ಗೆ ಹಿಂದಿನ ಅಂಗಡಿಕಾರರಿಗೆ ಅಂಗಡಿಯನ್ನು ಕಾಯ್ದಿರಿಸುವ ಬಗ್ಗೆ ಒಪ್ಪಂದ ಪತ್ರ ಮಾಡುವ ಬಗ್ಗೆ ಅಂಗಡಿಕಾರರ ಸಭೆಯಲ್ಲಿ ಚರ್ಚಿಸಿರುವ ಪ್ರಕಾರ ಈಗಾಗಲೇ ಅಂಗಡಿಕಾರರು ಬಾಕಿ ಪಾವತಿಸಿರುವ ಅಂಗಡಿಕಾರರಿಗೆ ಒಪ್ಪಂದ ಪತ್ರ ನೀಡಲಾಗುತ್ತಿದ್ದು, ಅದರಂತೆ ಇತ್ತೀಚಿಗೆ ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದ್ಯಸ ಗಣಪತಿ ಉಳ್ವೇಕರ, ನಗರಸಭಾ ಅಧ್ಯಕ್ಷ ಡಾ.ನಿತಿನ್ ಪಿಕಳೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಮನೋಜ ಬಾಂದೇಕರ ಇವರ ಉಪಸ್ಥಿತಿಯಲ್ಲಿ ಜಾಕೊಬ್ ಕಾಯ್ತಾನ ಪಿಂಟೋ ಹಾಗೂ ಗಜಾನನ ಮೇಸ್ತಾ ಅವರಿಗೆ ಸಾಂಕೇತಿಕವಾಗಿ ಒಪ್ಪಂದ ಪತ್ರ ಹಸ್ತಾಂತರ ಮಾಡಿರುವುದಾಗಿ ಪೌರಾಯುಕ್ತರ ಪ್ರಕಟಣೆಯಲ್ಲಿ ತಿಳಿಸಿದೆ.