ಕಾರವಾರ: ನಗರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಯ ಗುತ್ತಿಗೆಯನ್ನು ಪಡೆದಿರುವ ಈಗಲ್ ಇನ್ಫಾಸ್ಟ್ರಕ್ಚರ್ ಕಂಪನಿಯಲ್ಲಿ ನಾನು ಪಾಲುದಾರ ಎಂದು ಶಾಸಕಿ ರೂಪಾಲಿ ನಾಯ್ಕ ಆರೋಪ ಮಾಡಿದ್ದು ಇದು ಸತ್ಯಕ್ಕೆ ದೂರವಾಗಿದ್ದು ನಾನು ಯಾವುದೇ ಪಾಲುದಾರನಲ್ಲ ಎಂದು ಮಾಜಿ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸಕರು ತಮ್ಮ ಮೇಲೆ ಆರೋಪ ಬಂದರೆ ಅದಕ್ಕೆ ಉತ್ತರ ಕೊಡಲಿ. ಆದರೆ ಈಗಲ್ ಇನ್ಫಾಸ್ಟ್ರಕ್ಚರ್ ಎನ್ನುವ ಕಂಪನಿಯಲ್ಲಿ ತಾನು ಪಾಲುದಾರನಾಗಿದ್ದು ಸಮೀರ್ ನಾಯ್ಕ ಮೂಲಕ ಕೆಲಸ ಮಾಡಿಸುತ್ತಿದ್ದೇನೆ ಎನ್ನುವ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ಸಮೀರ್ ನಾಯ್ಕ ಈಗಲ್ ಇನ್ಫಾಸ್ಟ್ರಕ್ಚರ್ ಕಂಪನಿಯಲ್ಲಿ ಕೆಲಸಕ್ಕೆ ಇದ್ದಾರೋ ಇಲ್ಲವೋ ಅನ್ನುವುದು ತಿಳಿದಿಲ್ಲ. ಸಮೀರ್ ನಾಯ್ಕ ಎಂಟೆಕ್ ಪದವೀದರನಾಗಿದ್ದು ಸ್ಥಳೀಯ ಗುತ್ತಿಗೆದಾರನಿಗೆ ಈ ಕಾಮಗಾರಿಯನ್ನ ಕಂಪನಿಯವರು ನೀಡಿರಬಹುದು. ಆದರೆ ಬಿಜೆಪಿಯ ಜವಬ್ದಾರಿಯುತ ಸ್ಥಾನದಲ್ಲಿ ಇರುವ ಕೋಟಾ ಶ್ರೀನಿವಾಸ ಪೂಜಾರಿ ಅವರ ಸಮ್ಮುಖದಲ್ಲಿ ಶಾಸಕರು ಸುಳ್ಳು ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸೈಲ್ ಪ್ರಶ್ನಿಸಿದ್ದಾರೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನ ಕಾರವಾರಕ್ಕೆ ತರುತ್ತೇವೆ ಎಂದು ಶಾಸಕರು ಹೇಳಿದ್ದರು. ಆದರೆ ಇಂದಿಗೂ ತಂದಿಲ್ಲ. ಶಾಸಕರು ಕೆಲವು ಆರೋಪ ಮಾಡಿದ್ದು ಇಂತಹ ಆರೋಪ ಒಳ್ಳೆಯ ಬೆಳವಣಿಗೆಯಲ್ಲ. ನಾನು ಮಾಜಿ ಶಾಸಕನಾಗಿದ್ದು, ವಿಧಾನಸೌಧ ನಮ್ಮ ಆಸ್ತಿಯಲ್ಲ. ಐದು ವರ್ಷ ಜನರು ಒಳ್ಳೆಯದನ್ನ ಮಾಡಿ ಎಂದು ನಮ್ಮನ್ನ ಆಯ್ಕೆ ಮಾಡುತ್ತಾರೆ. ಒಳ್ಳೆಯದನ್ನ ಮಾಡಿದರೆ ನಾವು ಯೋಗ್ಯ, ಇಲ್ಲದಿದ್ದರೇ ನಾವು ಯೋಗ್ಯರಲ್ಲ ಎಂದು ತೆಗೆದು ಹಾಕುತ್ತಾರೆ. ನನ್ನನ್ನ ಜೈಲಿಗೆ ಹೋಗಿದ್ದಾರೆಂದು ಆರೋಪ ಮಾಡಿದ್ದಾರೆ. ನಾನು ಪೋರ್ಟ್ ನಡೆಸಿದ ಮನುಷ್ಯ. ಪೋರ್ಟ್ ನಡೆಸುವಾಗ 350 ಕಿಲೋ ಮೀಟರ್ ನಿಂದ ಬರುವ ಅದಿರನ್ನ ಹಡಗಿಗೆ ಹಾಕಿಕೊಳ್ಳುವ ವ್ಯವಸ್ಥೆಯನ್ನ ಮಾಡುತ್ತಿದೆ. ನಮ್ಮನ್ನ ಲಿಂಕ್ ಮಾಡಿ ಕೇಸ್ ಮಾಡಿದ್ದು, ಅದಕ್ಕಾಗಿ ಪ್ರಕರಣ ಎದುರುವ ಪರಿಸ್ಥಿತಿ ಬರುತ್ತಿತ್ತು. ನಾನು ಹೇಳಿದರೆ ಲೀಸ್ಟ್ ನಲ್ಲಿ ಬಹಳ ಜನ ಬರುತ್ತಾರೆ. ನಾನು ಅದಿರು ಮಾಲಿಕನಲ್ಲ. ಸಾಗಾಣಿಕೆದಾರನು ಅಲ್ಲ. ಆದರೆ ಬಂದರು ಒಳಗೆ ಕೆಲಸ ಮಾಡಿದ್ದೇನೆ. ಇದನ್ನೇ ಆರೋಪ ಮಾಡುವುದು ಸರಿಯಾದುದ್ದಲ್ಲ ಎಂದು ಸತೀಶ್ ಸೈಲ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕಾರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ, ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಉಪಸ್ಥಿತರಿದ್ದರು.