ಕೊಡಗು: ಜಿಲ್ಲೆಯಲ್ಲಿ ಬಾಡಿಗೆಗೆ ಮನೆ ಪಡೆದು ಆ ಮನೆಯನ್ನು ಅನಧಿಕೃತವಾಗಿ ಹೋಂಸ್ಟೇಯಾಗಿ ಪರಿವರ್ತನೆ ಮಾಡಿಕೊಂಡು ಹೋಂಸ್ಟೇ ನಡೆಸುತ್ತಿರುವ ಬಗ್ಗೆ ಮಾಹಿತಿ ಇದ್ದು, ಸಂಬಂಧಿಸಿದವರು ಪ್ರವಾಸೋದ್ಯಮ ಇಲಾಖೆಯಿಂದ ಹಾಗೂ ಜಿಲ್ಲಾಡಳಿತದಿಂದ ಅನುಮತಿ ಪಡೆದು ಹೋಂಸ್ಟೇಗಳನ್ನು ನೋಂದಾಯಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೂಚನೆ ನೀಡಿದ್ದಾರೆ.
ತಮ್ಮ ಕಚೇರಿಯಲ್ಲಿ ಕೊಡಗು ಜಿಲ್ಲೆಯ ಹೋಂಸ್ಟೇ ಮಾಲಕರ ಸಭೆ ನಡೆಸಿದ ಅವರು, ಹೊಂಸ್ಟೇ ನಡೆಸಲು ಸಂಬಂಧಪಟ್ಟ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಕಡ್ಡಾಯವಾಗಿ ಪಡೆಯತಕ್ಕದ್ದು ಹಾಗೂ ಸಮಯಕ್ಕೆ ತಕ್ಕಂತೆ ನವೀಕರಣ ಮಾಡಿಸಿಕೊಳ್ಳಬೇಕೆಂದು ಹೇಳಿದರು.
ಹೋಂಸ್ಟೇಗಳಲ್ಲಿ ಏನಾದರೂ ಕಾನೂನು ಬಾಹಿರ ಕೃತ್ಯಗಳು ನಡೆಯುತ್ತಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಲ್ಲಿ ಕೆ.ಎಸ್.ಪಿ ತಂತ್ರಾಂಶವನ್ನು ಬಳಸಿ ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು.
ಹೋಂಸ್ಟೇಗಳಲ್ಲಿ ತಂಗಲು ಬರುವ ಪ್ರವಾಸಿಗರು, ಸಾರ್ವಜನಿಕರ ಹೆಸರು, ವಿಳಾಸ, ಭಾವಚಿತ್ರ, ಗುರುತಿನ ಚೀಟಿ, ಆಧಾರ್ ಕಾರ್ಡ್’ಗಳನ್ನು ಅವರಿಂದ ಪಡೆದು ಪರಿಶೀಲಿಸಿ ರಿಜಿಸ್ಟರ್’ನಲ್ಲಿ ನಮೂದಿಸಿ ನಿರ್ವಹಿಸಬೇಕು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಹೋಂಸ್ಟೇಗಳಲ್ಲಿ ಗಾಂಜಾ ಮಾರಾಟ ಮತ್ತು ಸೇವನೆ ಪ್ರಕರಣಗಳು ವರದಿಯಾಗುತ್ತಿದ್ದು, ಈ ಬಗ್ಗೆ ಹೋಂಸ್ಟೇ ಮಾಲಕರು ತಮ್ಮ ಹೋಂಸ್ಟೇಗೆ ತಂಗಲು ಬರುವ ಪ್ರವಾಸಿಗರನ್ನು ಸರಿಯಾಗಿ ತಪಾಸಣೆ ನಡೆಸಬೇಕು. ತಪಾಸಣೆ ಸಂದರ್ಭ ಯಾವುದೇ ಸಂಶಯಾಸ್ಪದ ವಸ್ತು ಕಂಡುಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು.
ಹೋಂಸ್ಟೇ ಒಳಗೆ ಮತ್ತು ಹೊರ ಆವರಣದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾವನ್ನು ಅಳವಡಿಸಿ ಅಪರಾಧ ಕೃತ್ಯಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು. ಈ ಎಲ್ಲಾ ಸೂಚನೆಗಳನ್ನು ಪಾಲಿಸಿ ಪೊಲೀಸ್ ಇಲಾಖೆಯ ಜೊತೆ ಸಹಕರಿಸಬೇಕೆಂದು ರಾಮರಾಜನ್ ಕೋರಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್, ಮಡಿಕೇರಿ ಉಪವಿಭಾಗ ಉಪಾಧೀಕ್ಷಕ ಜಗದೀಶ್, ಪೊಲೀಸ್ ನಿರೀಕ್ಷಕರಾದ ಶಿವಶಂಕರ್, ಉಮೇಶ್ ಯು, ಎನ್.ಸಿ ನಾಗೇಗೌಡ ಹಾಗೂ ಹೋಂಸ್ಟೇ ಅಸೋಸಿಯೇಷನ್ ಪದಾಧಿಕಾರಿಗಳಾದ ಜೋಸೆಫ್ ಸಾಮ್, ಬಿ.ಸಿ.ಚೆಂಗಪ್ಪ, ಸಿ.ಎಸ್. ಧನಂಜಯ್, ಬಿ.ಜಿ.ಅನಂತ ಶಯನ, ನಳಿನಿ ಅಚ್ಚಯ್ಯ, ಮೊಹಂತಿ ಗಣೇಶ, ನವೀನ್ ಅಂಬೆಕಲ್, ಲೆ.ಕ.ಭರತ್, ವಿದ್ಯಾ ಚಂಗಪ್ಪ ಮತ್ತಿತರರು ಹಾಜರಿದ್ದರು.