ಕಾರವಾರ: 30 ವರ್ಷದ ಹಿಂದೆ ಕಾಲೇಜಿನಲ್ಲಿ ಪಾಠ ಮಾಡಿದ್ದ ನಿವೃತ್ತ ಉಪನ್ಯಾಸಕ ದಂಪತಿಗಳ ಸನ್ಮಾನಕ್ಕಾಗಿ ದೂರದ ಶಿವಮೊಗ್ಗದಿಂದ ಕಾರವಾರಕ್ಕೆ ಹುಡುಕಿಕೊಂಡು ಬಂದು, ಅವರನ್ನ ಗೌರವಿಸುವ ಮೂಲಕ ಗುರು- ಶಿಷ್ಯರುಗಳ ಸಮಾಗಮದ ಭಾವುಕ ಕ್ಷಣಕ್ಕೆ ಕಾರವಾರ ಸಾಕ್ಷಿಯಾಯಿತು.
ತಾಲೂಕಿನ ಸದಾಶಿವಗಡ ಮೂಲದ ಪುಷ್ಪ ಸುಖಟನಕರ್ ಹಾಗೂ ಅವರ ಪತಿ ರಮೇಶ್ ಸುಖಟನಕರ್ ಶಿವಮೊಗ್ಗ ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಪುಷ್ಪ ಅವರು ಗಣಿತ ಹಾಗೂ ರಮೇಶ್ ಅವರು ಭೌತಶಾಸ್ತ್ರ ವಿಷಯದಲ್ಲಿ ಉಪನ್ಯಾಸಕರಾಗಿದ್ದರು. ಇದೇ ಕಾಲೇಜಿನಲ್ಲಿ 1993ರಲ್ಲಿ ಪದವಿ ಕಲಿತ ವಿದ್ಯಾರ್ಥಿಗಳು ಹಳೆಯ ವಿದ್ಯಾರ್ಥಿ ಸಂಘವನ್ನ ಪ್ರಾರಂಭಿಸಿದ್ದರು. ಅಂದು ಬೋಧಿಸಿ ತಮ್ಮನ್ನು ಉತ್ತಮ ಹಂತಕ್ಕೆ ತಲುಪುವಂತೆ ಮಾಡಿದ್ದ ಉಪನ್ಯಾಸಕರುಗಳನ್ನ ಸನ್ಮಾನಿಸಲು ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು.
ಆದರೆ ಪುಷ್ಪಾ ಹಾಗೂ ರಮೇಶ್ ಅವರು ಅನಾರೋಗ್ಯಕ್ಕೊಳಗಾಗಿದ್ದರಿಂದ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ಬಗ್ಗೆ ಹಳೆಯ ವಿದ್ಯಾರ್ಥಿಗಳು ವಿಚಾರಿಸಿದಾಗ ಅವರು ಸದಾಶಿವಗಡದ ಪತ್ರಿಕಾ ವಿತರಕ ವಾಘ್ ಎನ್ನುವವರ ಮನೆಯಲ್ಲಿ ಇದ್ದಾರೆ ಎನ್ನುವ ಮಾಹಿತಿ ಪಡೆದು, ಶನಿವಾರ ಎಲ್ಲಾ ವಿದ್ಯಾರ್ಥಿಗಳು ಶಿವಮೊಗ್ಗದಿಂದ ವಾಹನ ಮಾಡಿಕೊಂಡು ಕಾರವಾರಕ್ಕೆ ಆಗಮಿಸಿ ಉಪನ್ಯಾಸಕ ದಂಪತಿಗಳಿಗೆ ಪಾದಪೂಜೆ ಮಾಡಿ ಸನ್ಮಾನಿಸುವ ಮೂಲಕ ಗೌರವಿಸಿದರು.
ತಮ್ಮ ಹಳೆಯ ನೆನಪುಗಳನ್ನ, ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಯಾವ ರೀತಿ ಪಾಠ ಮಾಡುತ್ತಿದ್ದರು ಎನ್ನುವ ವಿಚಾರಗಳನ್ನ ನೆನೆದರು. ಅಲ್ಲದೇ ಅನಾರೋಗ್ಯಕ್ಕೆ ಒಳಗಾಗಿದ್ದ ಉಪನ್ಯಾಸಕರನ್ನ ನೋಡಿ ಕಣ್ಣೀರಾದರು. ನಿವೃತ್ತ ಉಪನ್ಯಾಸಕರನ್ಮ ಖುಷಿಪಡಿಸಲು ಅವರ ಮುಂದೆ ವಿದ್ಯಾರ್ಥಿಗಳು ನೃತ್ಯ ಮಾಡಿದ್ದು ವಿಶೇಷವಾಗಿತ್ತು. ಹಳೆಯ ವಿದ್ಯಾರ್ಥಿಗಳ ಪ್ರೀತಿಗೆ ವೃದ್ಧ ಉಪನ್ಯಾಸಕ ದಂಪತಿಗಳು ಭಾವುಕರಾದರು.