Slide
Slide
Slide
previous arrow
next arrow

ಸ್ಥಳೀಯರಿಗೆ ಉದ್ಯೋಗಕ್ಕೆ ಮೀಸಲು ಕಲ್ಪಿಸುವ ಕಾನೂನು ಜಾರಿ ಮಾಡಬೇಕು: ಮುನೀರ್ ಕಾಟಿಪಳ್ಳ

300x250 AD

ದಾಂಡೇಲಿ: ದೇಶದ ಅತಿದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನರನ್ನು ಬಳಸಿಕೊಂಡು ದೇಶವನ್ನು ಅಭಿವೃದ್ಧಿಗೊಳಿಸಬೇಕಾದ ಸರಕಾರಗಳು ಯುವಜನರಿಗೆ ಹುಸಿ ಭರವಸೆ ನೀಡಿ ವಂಚಿಸುತ್ತಲೆ ಇವೆ. ಶಿಕ್ಷಣ ಹಾಗೂ ಉದ್ಯೋಗ ಸಿಗದೇ ಹತಾಶೆಗೊಂಡಿರುವ ಯುವಜನತೆಗೆ ಆಳುವ ವರ್ಗ ಪರಿಹಾರ ಒದಗಿಸುವ ಬದಲು ಅವರ ಮನಸ್ಸಿನಲ್ಲಿ ಜಾತಿ, ಧರ್ಮಾಂಧತೆ ಬಿತ್ತುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಡಿವೈಎಫ್‌ಐ ಸಂಘಟನೆಯ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು. ಅವರು ನಗರದ ಹಳೆದಾಂಡೇಲಿಯ ಹಾರ್ನ್ಬಿಲ್ ಸಭಾಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಡಿವೈಎಫ್‌ಐ ಸಂಘಟನೆಯ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿ ಅಧಿಕಾರದ ಚುಕ್ಕಾಣಿ ಹಿಡಿದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಖಾಲಿ ಇರುವ ಹುದ್ದೆಗಳನ್ನೆ ಭರ್ತಿ ಮಾಡಲು ಸಾಧ್ಯವಾಗದೇ ಇರುವಂತಹ ಸ್ಥಿತಿಯಲ್ಲಿ ಇನ್ನೇಲ್ಲಿ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯ. ಪೊಳ್ಳು ಭರವಸೆಗಳನ್ನು ನೀಡಿ ಉದ್ಯೋಗ ಸೃಷ್ಟಿ ಮಾಡುವ ಬದಲಾಗಿ, ಇರುವಂತಹ ಉದ್ಯೋಗಗಳನ್ನು ನಾಶಗೊಳಿಸಿ ದೇಶದ ಯುವ ಜನತೆಗೆ ದ್ರೋಹ ಬಗೆದಿದೆ ಎಂದು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಉತ್ತರ ಕನ್ನಡ ಜಿಲ್ಲೆಯು ಸೇರಿದಂತೆ ರಾಜ್ಯದ ವಿವಿಧ ಕೈಗಾರಿಕೆಗಳು ಉದ್ದಿಮೆಗಳು ಹಾಗೂ ದಾಂಡೇಲಿಯಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯ ಯುವ ಜನರಿಗೆ ಉದ್ಯೋಗ ಒದಗಿಸಲು ಆಧ್ಯತೆ ನೀಡಬೇಕು. ಉದ್ಯೋಗ ಸೃಷ್ಟಿಸದ ಉದ್ಯಮಗಳು ನಮಗೆ ಬೇಡ. ಜಾಗತಿಕ ಹೂಡಿಕೆಯಾಗಲಿ, ಸ್ಥಳೀಯ ಹೂಡಿಕೆಗಳಾಗಲಿ ಕಡ್ಡಾಯವಾಗಿ ಸ್ಥಳೀಯರಿಗೆ ಉದ್ಯೋಗಕ್ಕೆ ಮೀಸಲು ಕಲ್ಪಿಸುವ ಕಾನೂನು ಜಾರಿ ಮಾಡಬೇಕು. ಅದಕ್ಕಾಗಿಯೆ ರಾಜ್ಯದಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಈ ಕಾಲಕ್ಕೆ ತಕ್ಕಂತೆ ಮಾರ್ಪಡಿಸಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ದಾಂಡೇಲಿ ಹಾಗೂ ಜೊಯಿಡಾ ಪರಿಸರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕ್ಷೇತ್ರದಲ್ಲಿ ವಿವಿಧ ಆಯಾಮಗಳಲ್ಲಿ ಉದ್ಯೋಗ ಸೃಷ್ಟಿಯ ಜೊತೆಗೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು. ನಿರುದ್ಯೋಗ ಸಮಸ್ಯೆ ಸೇರಿದಂತೆ ವಿವಿಧ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಸಂಘಟನಾತ್ಮವಾಗಿ ಹೋರಾಡಲು ಯುವ ಜನಾಂದೋಲನ ಸಜ್ಜುಗೊಳಿಸಬೇಕಾದ ಹಿನ್ನಲೆಯಲ್ಲಿ ಈ ಕರ‍್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಯುವಜನತೆ ಸಮರ್ಥವಾಗಿ ಸೆಟೆದು ನಿಂತಾಗ ಮಾತ್ರ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಮುನೀರ್ ಕಾಟಿಪಳ್ಳ ಅಭಿಪ್ರಾಯಿಸಿದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಚಿಂತಕ ಶಿವಮೊಗ್ಗದ ರಾಜೇಂದ್ರ ಚೆನ್ನಿ, ವಿಶ್ವದಲ್ಲೆ ಭೀಕರ ಅಸಮಾನತೆಯನ್ನು ಹೊಂದಿದ ರಾಷ್ಟ್ರಗಳಲ್ಲಿ ನಮ್ಮ ದೇಶದ ಅಗ್ರ ಸ್ಥಾನದಲ್ಲಿದೆ ಎಂಬುವುದನ್ನು ಅಂಕಿ- ಅಂಶಗಳೇ ಸಾರಿ ಹೇಳುತ್ತಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೇವಲ ಪ್ರಚಾರದ ಅಮಲಿನಲ್ಲಿ ನಿಜವಾದ ಅಭಿವೃದ್ಧಿಯನ್ನು ಮರೆತು ದೇಶದ ಯುವ ಜನತೆಗೆ ದ್ರೋಹ ಬಗೆಯುತ್ತಿದೆ. ನಮ್ಮಲ್ಲಿರುವ ವಿದ್ಯಾವಂತ ಯುವಜನತೆ ಉದ್ಯೋಗವಿಲ್ಲದೆ ನಿರುದ್ಯೋಗ ಸಮಸ್ಯೆಯಿಂದ ಬಸವಳಿದಿದೆ. ದೇಶದಲ್ಲಿರುವ ಮೂಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ದೇಶದ ಪ್ರಗತಿಗೆ ಮಾರಕವಾಗುವಂತಹ ಮತೀಯ ಸಂಘರ್ಷಗಳೆ ಹೆಚ್ಚಾಗುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗಮನ ಕೊಡುವ ನಿಟ್ಟಿನಲ್ಲಿ ಮುಂದಾಗುತ್ತಿರುವುದು ದೇಶದ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಲಿದೆ ಎಂದರು.

300x250 AD

ಡಿವೈಎಫ್‌ಐ ರಾಜ್ಯ ಸಮಿತಿ ಸದಸ್ಯರಾದ ಡಿ.ಸ್ಯಾಮನಸ್ ಸ್ವಾಗತಿಸಿದರು. ಡಿವೈಎಫ್‌ಐ ರಾಜ್ಯ ಕಾರ‍್ಯದರ್ಶಿ ಬಸವರಾಜ ಪೂಜಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ‍್ಯಾಗಾರ ಸಿದ್ಧತಾ ಸಮಿತಿಯ ಕರ‍್ಯಾಧ್ಯಕ್ಷರಾದ ಸಲೀಂ ಸೈಯದ್ ಅವರು ವಂದಿಸಿದರು. ಎಸ್.ಎಫ್.ಐ ಜಿಲ್ಲಾ ಸಂಚಾಲಕರಾದ ಗಣೇಶ್ ರಾಥೋಡ ಮತ್ತು ಜನವಾದಿ ಮಹಿಳಾ ಸಂಘಟನೆಯ ರತ್ನಾದೀಪಾ.ಎನ್.ಎಂ ಅವರು ಕಾರ‍್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ರಾಜ್ಯದ ವಿವಿಧೆಡೆಗಳಿಂದ ಡಿವೈಎಫ್ ಪ್ರಮುಖರು, ಕಾರ‍್ಯಕರ್ತರು ಭಾಗವಹಿಸಿದ್ದರು.

ವೇದಿಕೆಯಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಎಂಪ್ಲಾಯಿಸ್ ಯೂನಿಯನ್ ಉಪಾಧ್ಯಕ್ಷ ಜಗದೀಶ್ ನಾಯ್ಕ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಕಾರ್ಯಾಗಾರ ಸಿದ್ಧತಾ ಸಮಿತಿಯ ಕಾರ್ಯಾಧ್ಯಕ್ಷ ಸಲೀಂ ಸೈಯದ್, ಅಂಗನವಾಡಿ ನೌಕರರ ಸಂಘದ ಪ್ರಮುಖರಾದ ಸೇವಂತಿ ದಬಾಲೆ, ಡಿವೈಎಫ್‌ಐ ರಾಜ್ಯ ಸಮಿತಿಯ ಸದಸ್ಯರುಗಳಾದ ಡಿ.ಸ್ಯಾಮಸನ್ ಮತ್ತು ಆಶಾ ಬೇಳೂರು, ಡಿವೈಎಫ್ ಜಿಲ್ಲಾ ಮುಖಂಡರಾದ ಇಮ್ರಾನ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top