ಹೊನ್ನಾವರ: ತಾಲೂಕಿನ ಸಾಲಕೋಡ- ಜನಸಾಲೆಗೆ ಎರಡೂವರೆ ವರ್ಷದ ಬಳಿಕ ಸಂಜೆಯ ಬಸ್ ಸಂಚಾರ ಪುನರಾರಂಭವಾಗಿರುವುದಕ್ಕೆ ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದರು.
ಸಾಲ್ಕೋಡ್ ಗ್ರಾಮಕ್ಕೆ ಕೋವಿಡ್ ಬಳಿಕ ರಾತ್ರಿ 6:45ರ ಬಸ್ ಬರುತ್ತಿರಲಿಲ್ಲ. ಹಲವು ಬಾರಿ ಗ್ರಾಮಸ್ಥರು, ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿರಲಿಲ್ಲ. ಕೊನೆಗೂ ಗ್ರಾಮಸ್ಥರು ಅಧಿಕಾರಿಗಳ ಗಮನ ಸೆಳೆದು ಸಮಸ್ಯೆ ಬಗೆಹರಿಸಲು ಮಂದಾಗಿ ಪ್ರಜ್ಞಾವಂತರು ಸೇರಿ ಶಿರಸಿ ಕಛೇರಿಗೆ ಹೋಗಿ ಬೇಡಿಕೆ ಮುಂದಿಟ್ಟರು. ಹೊನ್ನಾವರ ಪಟ್ಟಣಕ್ಕೆ ಪ್ರತಿನಿತ್ಯ ಕೆಲಸಕ್ಕೆ ಹೋಗಿ ಬರುವವರಿಗೆ ಸಮಸ್ಯೆ ಆಗುತ್ತಿದೆ. ಪಟ್ಟಣದಲ್ಲಿ ವಿದ್ಯಾಭ್ಯಾಸಕ್ಕೆ ಹೋಗಿ ಬರುವರಿಗೆ ಸಮಸ್ಯೆ ಆಗಲಿದೆ. ಗ್ರಾಮದಲ್ಲಿ ಚಿರತೆ ಕಾಟದ ಭೀತಿ ನಡುವೆ ಪ್ರತಿದಿನ ಖಾಸಗಿ ವಾಹನದ ಮೂಲಕ ಸಾಗುವ ಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಕೆ.ಎಚ್., ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯ ನಡುವೆ ಈ ಸಮಸ್ಯೆ ಎದುರಾಗಿದೆ. ಗ್ರಾಮಸ್ಥರ ಮಾಹಿತಿಯಂತೆ ಇದೇ ಸಮಯಕ್ಕೆ ಅರೇಅಂಗಡಿ ಮಾರ್ಗವಾಗಿ ತೊಳಸಾಣಿ ಸಾಗುವ ಬಸ್ ಸಾಲ್ಕೋಡ್- ಜನಸಾಲೆಗೆ ತೆರಳಿ ನಂತರ ತೊಳಸಾಣಿಗೆ ಹೋಗುವ ವ್ಯವಸ್ಥೆ ತಾತ್ಕಲಿಕವಾಗಿ ಕಲ್ಪಿಸುವ ಭರವಸೆ ನೀಡಿರುದಲ್ಲದೇ ಅಧಿಕಾರಿಗಳಿಗೆ ಸೂಚಿಸಿದ್ದರು. ಅಧಿಕಾರಿಗಳು, ಆಡಳಿತ ವರ್ಗಗಳ ಸಮನ್ವಯ ಚರ್ಚೆಯ ನಂತರ ಕೊನೆಗೂ ಬಸ್ ಸಂಚಾರ ಆರಂಭವಾಗಿದೆ.
ಈ ವೇಳೆ ಗ್ರಾ.ಪಂ. ಅಧ್ಯಕ್ಷೆ ರಜನಿ ನಾಯ್ಕ, ಹಳದೀಪುರ ಗ್ರಾ.ಪಂ. ಅಧ್ಯಕ್ಷ ಅಜಿತ್ ನಾಯ್ಕ, ಎಪಿಎಂಸಿ ಉಪಾಧ್ಯಕ್ಷ ಗಣಪತಿ ಹಳದೀಪುರ, ಗ್ರಾ.ಪಂ. ಸದಸ್ಯ ಗಣಪತಿ ಭಟ್, ಗ್ರಾಮಸ್ಥರು ಇದ್ದರು. ಬಸ್ ಸಂಚಾರ ಪುನಃ ಆರಂಭವಾಗಲು ಸಹಕರಿಸಿದ ಅಧಿಕಾರಿಗಳು, ತೊಳಸಾಣಿ, ದರ್ಬೆಜಡ್ಡಿ, ಕೆರೆಕೋಣ ಜನತೆಗೆ ಸಾಲ್ಕೋಡ್- ಜನಸಾಲೆಯ ಗ್ರಾಮಸ್ಥರು ಧನ್ಯವಾದ ಸಲ್ಲಿಸಿದರು.