ಶಿರಸಿ: ತಾಲೂಕಿನ ದೊಡ್ನಳ್ಳಿ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ರಾಜಗುರು ಸಂಗೀತೋತ್ಸವ 25 ರ ಸಂಗೀತ ಕಾರ್ಯಕ್ರಮ ಮಹಾಶಿವರಾತ್ರಿ ಪರ್ವಕಾಲದಲ್ಲಿ ಜನಮನ ಸೂರೆಗೊಂಡಿತು. ಇಳಿಹೊತ್ತು 4 ಘಂಟೆಯಿಂದ ಪ್ರಾರಂಭವಾದ ನಾದಾಭಿಷೇಕ ರಾತ್ರಿಯ ಪ್ರಥಮ ಪ್ರಹರದವರೆಗೂ ಅವಿರತವಾಗಿ ನಡೆದು, ಹಿರಿ-ಕಿರಿಯ ಖ್ಯಾತ ಕಲಾವಿದರು ನಾದಾರತಿ ಎತ್ತಿ ಪರಶಿವನ ಕೃಪೆಗೆ ಪಾತ್ರರಾದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಪದ್ಮಭೂಷಣ ಡಾ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ (ರಿ) ಧಾರವಾಡದ ಶ್ರೀಮತಿ ಭಾರತಿ ದೇವಿ ರಾಜಗುರು ಹಾಗೂ ವೇದಿಕೆಯ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ನಾಗರೀಕ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕಲೆ, ಸಂಸ್ಕೃತಿ ಹಾಗೂ ಸಂಗೀತ ಪರಂಪರೆಯ ಅಗ್ರಗಣ್ಯ ಕಲಾವಿದರಾದ ಪದ್ಮಭೂಷಣ ಡಾ.ಬಸವರಾಜ ರಾಜಗುರು ನಮ್ಮ ಜಿಲ್ಲೆಗೆ ಅತಿ ಹೆಚ್ಚು ಶಿಷ್ಯರನ್ನು ನೀಡಿದ್ದಾರೆ. ಖ್ಯಾತ ಗಾಯಕ ಡಾ. ಕೃಷ್ಣಮೂರ್ತಿ ಭಟ್ಟರು ಕಳೆದ 25 ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುವುದನ್ನು ಮುಕ್ತ ಕಂಠದಿಂದ ಶ್ಲಾಘಿಸಬಹುದು ಎಂದರು. ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಸ್ವಾಗತ ಕಮಾನಿನ ಹಾಗೂ ಅನ್ನಪೂರ್ಣ ಸಭಾಭವನವನ್ನು ಉದ್ಘಾಟಿಸಿದ ಶ್ರೀಯುತರು ದೊಡ್ನಳ್ಳಿ ಗ್ರಾಮದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಖ್ಯಾತ ಆಗ್ರಾ ಘರಾನೆಯ ಗಾಯಕ ಪಂ. ಪ್ರಭಾಕರ ಭಟ್ಟ ಕೆರೆಕೈ ದಂಪತಿಗಳು ಬೆಂಗಳೂರು ಇವರಿಗೆ ಕಲಾ ಸಮ್ಮಾನವಿತ್ತು ಗೌರವಿಸಲಾಯಿತು. ವೇದಿಕೆಯ ಮೇಲೆ ಗೌರವ ಉಪಸ್ಥಿತರಿದ್ದ ಶ್ರೀಮತಿ ಭಾರತಿದೇವಿ ರಾಜಗುರು ಅವರನ್ನು ವೇದಿಕೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಪಾದ ಹೆಗಡೆ, ಧಾರವಾಡದ ಡಾ.ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟನ ಟ್ರಸ್ಟಿಗಳಾದ ನಿಜಗುರು ರಾಜಗುರು ಹಾಗೂ ಶಿವಾನಂದ ರಾಜಗುರು ಉಪಸ್ಥಿತರಿದ್ದರು. ಆರ್. ಎನ್ ಭಟ್ಟ ಸುಗಾವಿ, ಎಸ್.ಎನ್. ಹೆಗಡೆ, ದೊಡ್ನಳ್ಳಿ, ಕೃಷ್ಣ ಮ್ಯೂಸಿಕ್ ಅಕಾಡೆಮಿಯ ನಿರ್ದೇಶಕ ಡಾ. ಕೃಷ್ಣಮೂರ್ತಿ ಭಟ್ಟ ಜಿ. ಪಂಚಾಯತ ಮಾಜಿ ಸದಸ್ಯೆ, ಶ್ರೀಮತಿ ಉಷಾ ಹೆಗಡೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕುಮಾರಿ ಗಗನಾ ಭಟ್ಟ ರಾಗ ಬೃಂದಾವನೀ ಸಾರಂಗ ಹಾಗೂ ಶಿವಸ್ತುತಿ ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಜಾಪುರದ ಸಿದ್ದೇಶ ಬಡಿಗೇರ ರಾಗ ಶಂಕರಾ ಹಾಗೂ ವಚನ ಪ್ರಸ್ತುತ ಪಡಿಸಿದರು. ಖ್ಯಾತ ಯುವ ಗಾಯಕಿ ಶ್ರೀಮತಿ ಸುನಿತಾ ಭಟ್ಟ, ರಾಗ ಹಾಗೂ ನಾಟ್ಯ ಸಂಗೀತವನ್ನು ಪ್ರಸ್ತುತ ಪಡಿಸಿ ಗಮನ ಸೆಳೆದರು. ಖ್ಯಾತ ತಬಲಾ ವಾದಕರ ಶಿಷ್ಯರಾದ ವಿನಾಯಕ ಸಾಗರ ಹಾಗೂ ರಾಮದಾಸ ಭಟ್ಟರ ಜುಗಲಬಂದಿ ತಬಲಾ ತರಂಗವನ್ನೇ ಸೃಷ್ಟಿಸಿತ್ತು.
ಗೋದೊಳಿ ಮಹೂರ್ತದಲ್ಲಿ ತಮ್ಮ ಕಾರ್ಯಕ್ರಮವನ್ನು ಪ್ರಾರಂಭಿಸಿದ ಡಾ. ಕೃಷ್ಣಮೂರ್ತಿ ಭಟ್ ರಾಗ ಪೂರ್ವಿ ಹಾಗೂ ವಚನವನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಕೊನೆಯಲ್ಲಿ ಕಲಾಸಮ್ಮಾನ ಪ್ರಶಸ್ತಿ ಪುರಸ್ಕೃತ ಪಂ. ಪ್ರಭಾಕರ ಭಟ್ಟ ಕೆರೆಕೈ ಅವರು ತಮ್ಮ ಸಹೋದರ ಪಂ. ಕಮಲಾಕರ ಭಟ್ಟರ ಪುತ್ರರಾದ ಕಿರಣ್ ಭಟ್ ಅವರೊಟ್ಟಿಗೆ ಗಾಯನ ಜುಗಲಬಂದಿ ಕಾರ್ಯಕ್ರಮದಲ್ಲಿ ರಾಗ ಜೋಗ ಹಾಗೂ ರಾಗ ಬಸಂತ ಪ್ರಸ್ತುತ ಪಡಿಸಿ ಜನಮನಸೂರೆಗೊಂಡರು. ಇವರಿಗೆಲ್ಲಾ ತಬಲಾದಲ್ಲಿ ವಿನಾಯಕ ಸಾಗರ, ರಾಮದಾಸ ಭಟ್ಟ,ಅರುಣ ಭಟ್ಟ ಕೆರೆಕೈ ಸಮರ್ಥವಾಗಿ ಸಾಥ್ ನೀಡಿ ಸೈ ಎನಿಸಿಕೊಂಡರು. ಹಾಮೋರ್ನಿಯಂದಲ್ಲಿ ಪ್ರಕಾಶ ಹೆಗಡೆ ಯಡಳ್ಳಿ, ಡಾ. ಸಮೀರ ಬಾದ್ರಿ ಸಿದ್ದಾಪುರ, ಕುಮಾರಿ ಉನ್ನತಿ ಕಾಮತ್ ಉತ್ತಮ ಸಾಥ್ ನೀಡಿದರು. ಅರುಣಕುಮಾರ ಭಟ್ಟ ಹರಿಗದ್ದೆ ಹಾಗೂ ಎಸ್.ಎನ್. ಹೆಗಡೆ ದೊಡ್ನಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಖ್ಯಾತ ಕಲಾವಿದರಾದ ಪ್ರಕಾಶ ಹೆಗಡೆ ಕಲ್ಲಾರಮನೆ ಪಂ.ಲಕ್ಷ್ಮೀಶ್ ರಾವ ಕಲ್ಲುಂಡಿಕೊಪ್ಪ ಸೇರಿದಂತೆ ರಸಿಕ ಸೋತ್ರಗಳ ಮನತಣಿಸುವಲ್ಲಿ ರಾಜಗುರು ಸಂಗೀತೋತ್ಸವ 25 ಯಶಸ್ವಿಯಾಯಿತು. ಡಾ. ಕೃಷ್ಣಮೂರ್ತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎನ್ ಹೆಗಡೆ ಹಾಗೂಶ್ರೀಪಾದ್ ಹೆಗಡೆ ದೊಡ್ನಳ್ಳಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.