ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳಿಗೆ ಸರಕಾರ ತುರ್ತು ನಿರ್ಧಾರದ ಕ್ರಮ ಘೋಷಿಸುವಂತೆ ಆಗ್ರಹಿಸಿ ಶಿರಸಿಯಲ್ಲಿ ಫೆ.25, ಶನಿವಾರದಂದು ‘ಅರಣ್ಯವಾಸಿಗಳ ಮಹಾ ಸಂಗ್ರಾಮ’ ಶಿರೋನಾಮೆಯಲ್ಲಿ ಬೃಹತ್ ಕಾರ್ಯಕ್ರಮ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಫೆ.10 ರಂದು ಸಂಘಟಿಸಲಾದ ಬೆಂಗಳೂರು ಚಲೋ ಕಾರ್ಯಕ್ರಮದ ಫಲಶೃತಿ ದೊರೆಯದಿದ್ದಲ್ಲಿ ಮೇಲಿನಂತೆ ಅರಣ್ಯವಾಸಿಗಳ ಮಹಾ ಸಂಗ್ರಾಮ ಸಂಘಟಿಸುವ ಕುರಿತು ಅವರು ಶಿರಸಿಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಪ್ರಮುಖರ ಸಭೆಯ ನಂತರ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರ ತಿದ್ದುಪಡಿ ಪ್ರಮಾಣ ಪತ್ರವನ್ನ ಸಲ್ಲಿಸುವುದು, 1978ರ ಪೂರ್ವ ಕೇಂದ್ರ ಸರಕಾರದಿಂದ ಮಂಜೂರಿಗೆ ಶೀಫಾರಸ್ಸು ಆಗಿರುವ 2513ಕುಟುಂಬಗಳಿಗೆ ಹಕ್ಕು ಪತ್ರ ನೀಡುವುದು, ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯಿಂದ ಹೆಚ್ಚುವರಿ ಅರಣ್ಯ ಪ್ರದೇಶ ಸೇರಿಸಿರುವುದು ಹಿಂದಕ್ಕೆ ಪಡೆಯುವುದು, ನಿರಂತರ ಅರಣ್ಯವಾಸಿಗಳ ಮೇಲೆ ಅರಣ್ಯಾಧಿಕಾರಿಗಳಿಂದ ಜರುಗುವ ದೌರ್ಜನ್ಯ ನಿಯಂತ್ರಿಸುವುದು, ಅರಣ್ಯವಾಸಿಗಳ ಮೇಲೆ ದಾಖಲಿಸಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಮುಂತಾದ ಹತ್ತು ಬೇಡಿಕೆಯನ್ನು ಸರಕಾರಕ್ಕೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಬೆಂಗಳೂರು ಚಲೋ ಸಂದರ್ಭದಲ್ಲಿ ನೀಡಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಇಬ್ರಾಹಿಂ ಗೌಡಳ್ಳಿ, ಎಮ್ ಆರ್ ನಾಯ್ಕ ಕಂಡ್ರಾಜಿ, ಲಕ್ಷ್ಮಣ ಮಾಳ್ಳಕ್ಕನವರ, ದಾಸು ಈರ ಗೌಡ ಉಪಸ್ಥಿತರಿದ್ದರು.
ಹೋರಾಟ ಅನಿವಾರ್ಯ:
ಅರಣ್ಯವಾಸಿಗಳ ಹಕ್ಕಿಗೆ ಸಂಬಂಧಿಸಿ ನಿರಂತರ 32 ವರ್ಷ ಸಾಂಘಿಕ ಮತ್ತು ಕಾನೂನಾತ್ಮಕ ಹೋರಾಟ ಜರುಗಿಸಿದಾಗಿಯೂ ಭೂಮಿ ಹಕ್ಕಿನಿಂದ ವಂಚಿತರಾಗುತ್ತಿರುವ ಅರಣ್ಯವಾಸಿಗಳ ಪರವಾಗಿ ಹೋರಾಟದ ಬದ್ಧತೆ ಮುಂದುವರೆಸುವುದು ಅನಿವಾರ್ಯವೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.