ಶಿರಸಿ: ತಾಲೂಕಿನ ಗಾಳಿಯಲ್ಲಿ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಫೆ.15 ಬುಧವಾರದಂದು ಹಿಂದಿ ಪ್ರತಿಭಾ ಪುರಸ್ಕಾರ ಹಾಗೂ ಕ್ರೀಡಾ ಪ್ರೇರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಹಿಂದಿ ವಿಷಯದಲ್ಲಿ ಶಾಲೆಗೆ ಅತಿ ಹೆಚ್ಚು ಅಂಕಗಳಿಸಿದ ವಿದಾರ್ಥಿಗಳಿಗೆ ದತ್ತಿನಿಧಿ ವಿತರಣೆ ಕಾರ್ಯಕ್ರಮವು ಹಿಂದಿ ಪ್ರತಿಭಾ ಪುರಸ್ಕಾರ ಶೀರ್ಷಿಕೆ ಅಡಿಯಲ್ಲಿ ನಡೆಯಿತು. ಶಾಲೆಯ ಹಳೆಯ ವಿದ್ಯಾರ್ಥಿಯಾದ ಶ್ರೀಮತಿ ಪದ್ಮಾವತಿ ಹಾಗೂ ಅವರ ಪತಿ ರೊ. ರವಿ ಹೆಗಡೆ ಗಡಿಹಳ್ಳಿ ಈ ದತ್ತಿನಿಧಿಯನ್ನು ಶಾಲೆಯಲ್ಲಿ ಸ್ಥಾಪಿಸಿ ಮೊದಲ ಬಾರಿ ಪುರಸ್ಕಾರವನ್ನು ವಿತರಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ರೊ. ರವಿ ಹೆಗಡೆ ಗಡಿಹಳ್ಳಿ, ಹಿಂದಿ ಭಾಷೆಯ ಅಭಿಮಾನ ಹಾಗೂ ಅಗತ್ಯತೆ ಕುರಿತು ಮಾತನಾಡಿದರು.
ಹಿಂದಿ ವಿಷಯದ ಪ್ರಸ್ತುತತೆ ಕುರಿತು ಶಿರಸಿ ಎಮ್ಎಮ್ ಆರ್ಟ್ಸ ಎಂಡ್ ಸೈನ್ಸ್ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ. ಸುಜಾತಾ ಫಾತರಫೇಕರ್ ಮಾತನಾಡಿ, ದೈನಂದಿನ ಜೀವನದಲ್ಲಿ, ಬದುಕಿನಲ್ಲಿ ಹಿಂದಿ ಭಾಷೆಯ ಅಗತ್ಯತೆ ಹಾಗೂ ಪ್ರಸ್ತುತತೆ ಕುರಿತು ಉಪನ್ಯಾಸ ನೀಡಿದರು. ನಂತರದಲ್ಲಿ ಉತ್ತರಕನ್ನಡ ಜಿಲ್ಲಾ ಕೇರಂ (ಥಂಬ್) ಆಟಗಾರರ ಸಂಘದ ಅಧ್ಯಕ್ಷ, ಸ್ಪೂರ್ತಿ ಕೇರಂ ಅಸೋಸಿಯೇಷನ್,ಶಿರಸಿಯ ರೊ. ರವಿ ಹೆಗಡೆ ಗಡಿಹಳ್ಳಿ, ಶ್ರೀ ಸಿದ್ಧಿವಿನಾಯಕ ಇಂಟರ್ಯಾಕ್ಟ್ ಕ್ಲಬ್ ಸಹಯೋಗದಲ್ಲಿ ಚಂದ್ರು ಭಟ್ಟ ಶಿರಸಿ ಕೇರಂ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಥಂಬ್ ಕೇರಂ ಕುರಿತು ಹೊಸ ನಿಯಮಗಳು ಹಾಗೂ ಆಡುವ ರೀತಿಯ ಕುರಿತು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ಒದಗಿಸಿಕೊಟ್ಟರು.ಶಾಲೆಯ ಮುಖ್ಯಾಧ್ಯಾಪಕ ನಾರಾಯಣ ದೈಮನೆ ಅಧ್ಯಕ್ಷತೆ ವಹಿಸಿದ್ದರು.ಸಂಸ್ಥೆಯ ಕೋಶಾಧ್ಯಕ್ಷ ರಮೇಶ ಭಟ್ಟ ಅಬ್ಬಿಹದ್ದ, ಸದಸ್ಯರಾದ ಸಿ.ಎಸ್. ಹೆಗಡೆ ನೇರಲಹದ್ದ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಗಣೇಶ ಜಿ. ಹೆಗಡೆ ಸ್ವಾಗತಿಸಿದರು. ಪದ್ಮನಾಭ ಭಟ್ಟ ವಂದಿಸಿದರು. ಪಿ. ಮಂಜಪ್ಪ ಕಾರ್ಯಕ್ರಮ ಸಂಪೂರ್ಣವಾಗಿ ಹಿಂದಿ ಭಾಷೆಯಲ್ಲಿಯೇ ನಿರೂಪಿಸಿದರು.