ಮುಂಡಗೋಡ: 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಜೈಭೇರಿ ಬಾರಿಸಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು 100% ಸತ್ಯ ಎಂದು ಶಾಸಕ ಆರ್.ವಿ.ದೇಶಪಾಂಡೆ ಭವಿಷ್ಯ ನುಡಿದರು.
ಅತ್ಯುತ್ತಮ ಶಾಸಕ ಪ್ರಶಸ್ತಿ ಪಡೆದಿದ್ದಕ್ಕಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಸುಮಾರು 200ಕ್ಕೂ ಅಧಿಕ ಬಿಜೆಪಿ ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಕಾಂಗ್ರೆಸ್ಗೆ ಬರಮಾಡಿಕೊಂಡು ಮಾತನಾಡಿದ ಅವರು, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿ ಸರಕಾರದಲ್ಲಿ ಬೆಲೆ ಏರಿಕೆಯ ಧಗೆಯಿಂದ ಬಡವ ತತ್ತರಿಸಿ ಹೋಗಿದ್ದಾನೆ. ಸಿದ್ದರಾಮಯ್ಯ ಸರಕಾರ ಕೊಟ್ಟಂತಹ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಡಿಮೆ ಮಾಡಿ ಈಗ ಪ್ರತಿ ತಲೆಗೆ ಐದು ಕಿಲೋ ಅಕ್ಕಿ ಕೊಡಲಾಗುತ್ತಿದೆ. ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಾಢ್ಯವಾಗಿ ಬೆಳೆದಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಶತಃಸಿದ್ಧ ಎಂದರು.
ಕಾಂಗ್ರೆಸ್ ಬಿಡುಗಡೆ ಮಾಡುವ ಪ್ರಣಾಳಿಕೆಯನ್ನು ಬೂತ್ ಮಟ್ಟದ ಅಧ್ಯಕ್ಷರು, ಕಾರ್ಯಕರ್ತರು ಹಾಗೂ ಹಿರಿಯ ಮುಖಂಡರು, ಟಿಕೇಟ್ ಆಕಾಂಕ್ಷಿಗಳು ಮತದಾರರ ಮನೆಮನೆಗಳಿಗೆ ಹೋಗಿ ಮಾಹಿತಿ ನೀಡಿ, ಅಧಿಕಾರಕ್ಕೆ ಬಂದರೆ ನಮ್ಮ ಸರಕಾರ ಇಂತಿಂತ ಜನಪರ ಯೋಜನೆಗಳನ್ನು ಜಾರಿಗೆ ತರುತ್ತದೆ ಎಂದು ಹೇಳುವುದರಿಂದ ಪಕ್ಷದ ಮತದಾರರ ಮನಃಪರಿವರ್ತನೆಯಾಗುತ್ತದೆ ಎಂದರು.
ಜಿ.ಪಂ. ಮಾಜಿ ಸದಸ್ಯ ರಘು ಭಟ್ಟ ಪಕ್ಷ ಸೇರ್ಪಡೆಗೊಂಡು ಮಾತನಾಡಿ, ಬಿಜೆಪಿಯಲ್ಲಿ ಭ್ರಷ್ಟಾಚಾರ ನೋಡಲಾರದೆ ಕಾಂಗ್ರೆಸ್ ಪಕ್ಷವನ್ನು ಸೇರಿದ್ದೇನೆ. ಎಲ್ಲ ಕಡೆ 40% ಕಮಿಷನ್ ಇದ್ದರೆ ಯಲ್ಲಾಪುರದಲ್ಲಿ 50% ಎಂದರೂ ತಪ್ಪಾಗಲಾರದು. ಅಷ್ಟೊಂದು ಭ್ರಷ್ಟಾಚಾರ ಯಲ್ಲಾಪುರದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಶ್ರೀನಿವಾಸ ಭಟ್ಟ ಧಾತ್ರಿ ಮಾತನಾಡಿ, ಕ್ಷೇತ್ರದಲ್ಲಿ ಭ್ರಷ್ಟಾಚಾರದಿಂದ ಜನಜೀವನ ಮಾಡುವುದು ಕಷ್ಟವಾಗಿದೆ. ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕರನ್ನು ಬದಲಾವಣೆ ಮಾಡುವುದರಿಂದ ಕ್ಷೇತ್ರದ ಜನತೆ ನೆಮ್ಮದಿಯಿಂದ ಬಾಳಲು ಸಾಧ್ಯ ಎಂದರು.
ಮಾಜಿ ಶಾಸಕ ವಿ.ಎಸ್.ಪಾಟೀಲ, ಕಮಿಷನ್ ತಿನ್ನುವವರಿಗೆ ಹೇಗೆ, ಯಾವ ರೀತಿಯಿಂದ ತಿನ್ನಬೇಕು ಎಂದು ಗೊತ್ತಿರುತ್ತದೆ. ಯಾವ ಹಾದಿಯಿಂದ ತಿಂದರೆ ತಾವು ತಿಂದದ್ದು ಗೊತ್ತಾಗಲ್ಲ ಎನ್ನುವುದು ಅರಿತು ಆ ಹಾದಿಯಿಂದ ಕಮಿಷನ್ ತಿನ್ನುವುದರಿಂದ ದಾಖಲೆಗಳು ಇರುವುದಿಲ್ಲ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿನಾಥ ಗಾಂವ್ಕರ, ಜಿ.ಎಚ್.ಮರಿಯೋಜಿರಾವ ಮಾತನಾಡಿದರು. ಬ್ಲಾಕ್ ಅಧ್ಯಕ್ಷ ಜ್ಞಾನೇಶ್ವರ ಗುಡಿಯಾಳ ಸ್ವಾಗತಿಸಿದರು. ಎಚ್.ಎಮ್.ನಾಯಕ್, ಕೃಷ್ಣ ಹಿರಳ್ಳಿ, ಅಶೋಕ ಸಿರ್ಸಿಕರ, ಪಿ.ಜಿ. ತಂಗಚ್ಚನ್, ರಾಮಕೃಷ್ಣ ಮೂಲಿಮನಿ, ಮಂಜುನಾಥ ಪಾಟೀಲ, ಪ.ಪಂ ಸದಸ್ಯರಾದ ಮಹ್ಮದಜಾಫರ ಹಂಡಿ, ಅಹ್ಮದರಜಾ ಪಠಾಣ, ಮಹ್ಮದಗೌಸ ಮಕಾನದಾರ ಸೇರಿದಂತೆ ಆಲೇ ಹಸನ ಬೆಂಡಿಗೇರಿ, ರಾಜೇಸಾಬ ಕುಂಕೂರ, ಧರ್ಮರಾಜ ನಡಗೇರ ಯಲ್ಲಾಪುರ ಬ್ಲಾಕ್ ಅಧ್ಯಕ್ಷ ಗಾಂವಕರ, ವಿ.ಎಸ್. ಭಟ್ಟ, ದೀಪಕ ಹೆಗಡೆ ದೊಡ್ಡೂರ, ಶಾರದ ರಾಠೋಡ, ಭಾರತಿ ಮಣ್ಣಪ್ಪ ಗೌಡರ ಸೇರಿದಂತೆ ಮುಂತಾದವರು ಇದ್ದರು.