ಹೊನ್ನಾವರ : ಸಂವಿಧಾನವೆಂಬುದು ಭ್ರಮೆಯಲ್ಲ ಅದು ನೈಜವಾಗಿದೆ.ಅದನ್ನು ಅರ್ಥೈಸಿಕೊಳ್ಳುವುದು ಕಷ್ಟಕರವಲ್ಲ. ಸಂವಿಧಾನವೆಂಬುದು ಕೇವಲ ನ್ಯಾಯಿಕ ಸಂಸ್ಥೆಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ ಎಂದು ಹೊನ್ನಾವರದ ಖ್ಯಾತ ನ್ಯಾಯವಾದಿ ಸತೀಶ್ ಭಟ್ ಉಳ್ಗೆರೆ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಂವಿಧಾನ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ನಿಯಮಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಸ್ಥೆಗಳು ಸಂವಿಧಾನ ಮಾದರಿ, ರಾಜನ ಮಗನು ರಾಜನಾಗುವ ರಾಜತಂತ್ರದ ಮಾದರಿ ತೊಡೆದು ಹಾಕಿ , ಸಾಮಾನ್ಯ ಪ್ರಜೆಯೂ ಕೂಡ ಸರ್ಕಾರ ರಚನೆಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಪ್ರಜಾತಂತ್ರದ ಉಗಮಕ್ಕೆ ಅನುವು ಮಾಡಿಕೊಟ್ಟ ವಿಧಾನವೇ ಸಂವಿಧಾನ. ಸಂವಿಧಾನ ಎಂಬುದು ನಿಂತ ನೀರಲ್ಲ. ಕಾಲಕ್ಕನುಗುಣವಾಗಿ ಬದಲಾಗುತ್ತಾ , ಹೊಸ ನಿಯಮಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳುತ್ತಾ , ಬೆಳೆಯುವ ಜೀವಂತ ಕೃತಿಯೇ ಸಂವಿಧಾನ .
ಜೀವಿಸಿರಿ ಹಾಗೂ ಇತರರಿಗು ಜೀವಿಸಲು ಕೊಡಿ ಎಂಬ ಮಾನವೀಯ ಮೂಲತತ್ವವನ್ನು ಕಾನೂನಾತ್ಮಕವಾಗಿ ತಿಳಿಯಪಡಿಸುವ ಹಾಗೂ ಪ್ರತಿಪಾದಿಸುವ ಗ್ರಂಥವೇ ಸಂವಿಧಾನ ಎಂದು ಮಕ್ಕಳಿಗೆ ಸಂವಿಧಾನದ ಬಗ್ಗೆ ವಿವರಾತ್ಮಕವಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ.ಎಚ್.ಭಟ್ ಮಾತನಾಡಿ ನಾವೆಲ್ಲರೂ ಒಂದು ಎಂಬ ಐಕ್ಯತೆಯ ಭಾವನೆಯನ್ನು ಬಿಂಬಿಸುವ , ಎಲ್ಲರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿಸುವ ಸಂವಿಧಾನದ ಬಗ್ಗೆ ನಮಗೆಲ್ಲರಿಗೂ ಅರಿವಿರಬೇಕು ಎಂದು ನುಡಿದರು.
ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಹಾಗೂ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ನಿಜಲಿಂಗಪ್ಪ ಎಚ್ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಕನ್ನಡ ಉಪನ್ಯಾಸಕ ಎಂ.ಎನ್. ಅಡಿಗುಂಡಿ ಕಾರ್ಯಕ್ರಮ ನಿರೂಪಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ನೆಕ್ಸಾನ್ ಗೊನ್ಸ್ವಾಲಿಸ್ ವಂದಿಸಿದರು.