ಕಾರವಾರ: ರಸ್ತೆ, ಕುಡಿಯುವ ನೀರು, ಹೀಗೆ ಜನರಿಗೆ ಅಗತ್ಯವಾದ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಮಾಡಿಕೊಟ್ಟಿರುವುದಾಗಿ ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.
ತಾಲ್ಲೂಕಿನ ಚೆಂಡಿಯಾ ಹಾಗೂ ತೋಡುರು ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಚೆಂಡಿಯಾದಲ್ಲಿ ಅನೇಕ ರಸ್ತೆ, ಹಳ್ಳಕ್ಕೆ ತಡೆಗೋಡೆ ಇನ್ನಿತರ ಕಾಮಗಾರಿಗಳಿಗೆ ಸುಮಾರು 14 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಒದಗಿಸಲಾಗಿದೆ. ಇಲ್ಲಿಯ ಜನತೆ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಅದಕ್ಕೆಲ್ಲ ಪರಿಹಾರ ಒದಗಿಸುತ್ತಿದ್ದೇನೆ. ತ್ವರಿತವಾಗಿ ಕಾಮಗಾರಿಗಳು ನೆರವೇರಬೇಕು. ಜನರಿಗೆ ಅವಶ್ಯಕವಾಗಿರುವ ಕಾಮಗಾರಿಗಳನ್ನು ಒದಗಿಸಲಾಗಿದೆ. ಮುಂದೆಯೂ ಜನರಿಗೆ ಅಗತ್ಯವಾದ ಕಾಮಗಾರಿಗಳನ್ನು ಮಾಡಿಕೊಡುವುದಾಗಿ ಅವರು ಭರವಸೆ ನೀಡಿದರು.
ಉಪ್ಪು ನೀರು ತಡೆಗೋಡೆಗೂ ನಮ್ಮ ಸರ್ಕಾರ ಅನುದಾನವನ್ನು ಒದಗಿಸಿದೆ. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಣ್ಣ ನೀರಾವರಿ ಸಚಿವರಾದ ಮಾಧುಸ್ವಾಮಿ ಅವರು ಮುತುವರ್ಜಿ ವಹಿಸಿ ಅನುದಾನವನ್ನು ಒದಗಿಸಿದ್ದಾರೆ ಎಂದರು.
ಸ್ಥಳೀಯ ಯುವಕರಿಗೆ ಹಾಗೂ ಕನ್ನಡಿಗರಿಗೆ ಉದ್ಯೋಗ ಒದಗಿಸಬೇಕು ಎಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದೇನೆ. ಮುಡಗೇರಿಯಲ್ಲಿ ಕೈಗಾರಿಕೆ ಸ್ಥಾಪನೆಗೂ ಪ್ರಯತ್ನಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಮ್ಮ ಯುವಕರಿಗೆ ಉದ್ಯೋಗ ಲಭಿಸಲಿದೆ ಎಂದು ತಿಳಿಸಿದರು. ತೋಡುರಿನಲ್ಲಿ ಸಹ ಹಲವು ಕಾಮಗಾರಿಗಳನ್ನು ಮಾಡಲಾಗಿದೆ. ಒಂದೆರಡು ಕಡೆ ವಿಳಂಬ ಉಂಟಾಗಿದೆ. ಗ್ರಾಮಸ್ಥರೇ ಮುಂದೆ ನಿಂತು ಕೆಲಸವನ್ನು ಸಮರ್ಪಕವಾಗಿ ಮಾಡಿಸಿಕೊಳ್ಳಬೇಕು. ಮುಖ್ಯ ಕಾಲೋನಿ ಮುಖ್ಯರಸ್ತೆ ನಿರ್ಮಾಣವಾದಲ್ಲಿ ಜನರ ಸಮಸ್ಯೆ ಪರಿಹಾರವಾಗಲಿದೆ ಎಂದರು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಬಸ್ ತಂಗುದಾಣವನ್ನು ನಿರ್ಮಾಣ ಮಾಡಲು ಅನುದಾನವನ್ನು ಒದಗಿಸಿದ್ದೇನೆ. ಅದು ಕೂಡ ಇಲ್ಲಿಯ ಜನರಿಗೆ ಅನುಕೂಲವಾಗಲಿದೆ. ಇಲ್ಲಿಯ ಜನರಿಗೆ ನೀರಿನ ಸಮಸ್ಯೆ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಜೆಜೆಎಂ ನಲ್ಲಿ ಅಸಮರ್ಪಕ ಕಾಮಗಾರಿಯಾಗಿ ಜನರಿಗೆ ನೀರು ತಲುಪುತ್ತಿಲ್ಲ. ಹೊಸದಾಗಿ ಪೈಪ್ ಅಳವಡಿಸಿ ನೀರು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎರಡೂ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಬಿಜೆಪಿ ಗ್ರಾಮೀಣ ಮಂಡಲ ಕಾರವಾರ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಮತ್ತಿತರರು ಉಪಸ್ಥಿತರಿದ್ದರು.