ಅಂಕೋಲಾ: ಬೆಳೆಗಾರರ ಸಮಿತಿ ಅಂಕೋಲಾದವರು ರಾಜ್ಯದಲ್ಲಿಯೇ ಮಾದರಿ ಆಗಬಹುದಾದ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ಅದರ ಅಂಗವಾಗಿ ಇತ್ತೀಚೆಗೆ ಬೆಲೇಕೇರಿಯ 27 ಸ್ವಾತಂತ್ರ್ಯ ಯೋಧರ ಕುಟುಂಬದವರನ್ನು ಗೌರವಿಸುವ ಕಾರ್ಯಕ್ರಮ ನಡೆಸಿದರು.
ವಕೀಲ ನಾಗರಾಜ ನಾಯಕರ ಕಲ್ಪನೆಯಲ್ಲಿ ಮೂಡಿಬಂದ ಬೆಳೆಗಾರರ ಸಮಿತಿ ಅಂಕೋಲಾ ತಾಲೂಕಿನಾದ್ಯಂತ ಈಗಾಗಲೇ ನೂರಾರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರನ್ನು ಅಭಿನಂದಿಸಿದೆ. ಈ ಅಭಿಯಾನದ ಮುಂದುವರೆದ ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ನಾಗರಾಜ ನಾಯಕ ಅಂದಿನ ಹೋರಾಟಗಾರರು ಜೈಲು ಶಿಕ್ಷೆ ಅನುಭವಿಸುವಾಗ ಅವರ ಕುಟುಂಬ ಹೆಂಡತಿ, ಮಕ್ಕಳು ಅವಲಂಬಿತರು ಹೇಗೆ ಜೀವನ ಸಾಗಿಸಿರಬಹುದು? ಇಂದಿನಷ್ಟು ಸ್ಥಿತಿವಂತರಲ್ಲದೇ ಸಂಪರ್ಕದ ಕೊರತೆಯ ನಡುವೆ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಮಹತ್ವದ ಕುರಿತಾಗಿ ಅಂದಿನವರ ತ್ಯಾಗದಿಂದಾಗಿ ಇಂದು ನಾವೆಲ್ಲ ಸ್ವಾವಲಂಬಿಗಳಾಗಿ ಜೀವನ ಸಾಗಿಸುತ್ತಿದ್ದೇವೆ. ಸ್ವಾತಂತ್ರ್ಯ ನಂತರದ ಭಾರತದ ಸೈನಿಕರಿಗಿರುವಷ್ಟೇ ಪ್ರಾಮುಖ್ಯತೆ ಸ್ವಾತಂತ್ರ್ಯ ಪೂರ್ವ ಹೋರಾಟಗಾರರಿಗೆ ಸಲ್ಲಬೇಕು ಎಂದು ಹೇಳಿದರು.
ಮುಖ್ಯ ವಕ್ತಾರಾಗಿ ಆಗಮಿಸಿದ ನಿವೃತ್ತ ಪ್ರಾಧ್ಯಾಪಕ ಶ್ರೀಧರ ನಾಯಕ ಮಾತನಾಡಿ, ಬೆಲೇಕೇರಿ ಭಾಗದ ಅಂದಿನ ಹೋರಾಟದ ಚಟುವಟಿಕೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಬೆಳೆಗಾರರ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ಹೆಗಡೆ ಕಾರ್ಯಕ್ರಮ ನಿರ್ವಹಿಸಿ ಮಾತನಾಡಿ, ಬೆಲೇಕೇರಿಯ ಸ್ವಾತಂತ್ರ್ಯ ಹೋರಾಟಗಾರ ಹೆಸರು ಶಾಶ್ವತಗೊಳಿಸಲು ಗ್ರಾಮದಲ್ಲಿ ಅವರ ಹೆಸರಿನ ಸ್ತೂಪ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪಿಸಿದರು. ಪ್ರಮುಖರಾದ ಮಂಜೇಶ್ವರ ನಾಯಕ ಮಾತನಾಡಿ, ಜೈನವೀರ ಯುವಕ ಸಂಘದ ಸಹಯೋಗದಲ್ಲಿ ಸ್ತೂಪ ನಿರ್ಮಿಸುವ ಭರವಸೆ ನೀಡಿದರು. ಯುವಕ ಸಂಘದ ಸದಸ್ಯರು, ಸಾರ್ವಜನಿಕರು ಬೆಳೆಗಾರರ ಸಮಿತಿಯ ಅನೇಕ ಸದಸ್ಯರು ಹೋರಾಟಗಾರರ ಕುಟುಂಬದವರು ಭಾಗವಹಿಸಿದ್ದರು. 27 ಹೋರಾಟಗಾರರ ಕುಟುಂಬದವರಿಗೆ ಗೌರವಿಸಲಾಯಿತು. ಹರೀಶ ನಾಯಕ ಸರ್ವರನ್ನು ವಂದಿಸಿದರು.
ವೇದಿಕೆಯಲ್ಲಿ ಬೆಳೆಗಾರರ ಸಮಿತಿಯ ಗೌರವಾಧ್ಯಕ್ಷ ದೇವರಾಯ ನಾಯಕ ಬೋಳೆ, ಸದಸ್ಯರಾದ ರಾಮಾ ನಾಯಕ ಹುಲಿದೇವರವಾಡ, ನಿವೃತ್ತ ಶಿಕ್ಷಕ ದೇವರಾಯ ಬಿ. ನಾಯಕ, ಪ್ರಮುಖರಾದ ನಾರಾಯಣ ಆರ್. ನಾಯಕ, ಮಂಜೇಶ್ವರ ನಾಯಕ, ವಕೀಲರಾದ ಉಮೇಶ ನಾಯ್ಕ, ಗ್ರಾ.ಪಂ. ಸದಸ್ಯರಾದ ಧೀರಜ ಬಾನಾವಳಿಕರ, ಶೈಲಾ ನಾಯಕ ಹಾಗೂ ಸಂಜೀವ ಕುಚಿನಾಡು ಉಪಸ್ಥಿತರಿದ್ದರು.