ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 5.9 ಮಿಲಿಯನ್ ಟನ್ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಲಿಥಿಯಂ ಒಂದು ನಾನ್-ಫೆರಸ್ ಲೋಹವಾಗಿದ್ದು, EV ಬ್ಯಾಟರಿಗಳಲ್ಲಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. “ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್-ಹೈಮಾನಾ ಪ್ರದೇಶದಲ್ಲಿ ಭಾರತದ ಭೂವೈಜ್ಞಾನಿಕ ಸಮೀಕ್ಷೆಯು ಮೊದಲ ಬಾರಿಗೆ 5.9 ಮಿಲಿಯನ್ ಟನ್ಗಳ ಲಿಥಿಯಂ ಸಂಪನ್ಮೂಲಗಳನ್ನು (G3) ಪತ್ತೆ ಮಾಡಿದೆ” ಎಂದು ಗಣಿ ಸಚಿವಾಲಯ ತಿಳಿಸಿದೆ.
ಅಲ್ಲದೇ ಲಿಥಿಯಂ ಮತ್ತು ಚಿನ್ನ ಸೇರಿದಂತೆ ದೇಶದಲ್ಲಿ ಪತ್ತೆಯಾದ 51 ಖನಿಜ ಬ್ಲಾಕ್ಗಳನ್ನು ಆಯಾ ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದೆ.
“ಈ 51 ಖನಿಜ ಬ್ಲಾಕ್ಗಳಲ್ಲಿ, 5 ಬ್ಲಾಕ್ಗಳು ಚಿನ್ನ ಮತ್ತು ಇತರ ಬ್ಲಾಕ್ಗಳು ಪೊಟ್ಯಾಶ್, ಮಾಲಿಬ್ಡಿನಮ್, ಮೂಲ ಲೋಹಗಳು ಮುಂತಾದ ಸರಕುಗಳಿಗೆ ಸಂಬಂಧಿಸಿದೆ. ಜಮ್ಮು ಮತ್ತು ಕಾಶ್ಮೀರ, ಆಂಧ್ರಪ್ರದೇಶ, ಛತ್ತೀಸ್ಗಢ, ಗುಜರಾತ್, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ11 ರಾಜ್ಯಗಳಲ್ಲಿ ಹರಡಿವೆ”ಎಂದು ಸಚಿವಾಲಯ ತಿಳಿಸಿದೆ.
ಇವುಗಳಲ್ಲದೆ, ಒಟ್ಟು 7897 ಮಿಲಿಯನ್ ಟನ್ಗಳ ಸಂಪನ್ಮೂಲ ಹೊಂದಿರುವ ಕಲ್ಲಿದ್ದಲು ಮತ್ತು ಲಿಗ್ನೈಟ್ನ 17 ವರದಿಗಳನ್ನು ಸಹ ಕಲ್ಲಿದ್ದಲು ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದೆ.