ಶಿರಸಿ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಶಿರಸಿ ಕ್ಷೇತ್ರದಿಂದ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದ್ದು, ಈ ಬಗ್ಗೆ ಗುರುವಾರ ಹೊನ್ನಾವರದಲ್ಲಿ ಪ್ರತ್ಯೇಕವಾಗಿ ಉಪೇಂದ್ರ ಪೈ ಕುಮಾರಸ್ವಾಮಿ ಜೊತೆ ಚರ್ಚೆ ನಡೆಸಿದ್ದಾರೆ.
ಶಿರಸಿ ವಿಧಾನಸಭಾ ಕ್ಷೇತ್ರದಿಂದ ಕಳೆದ ಎರಡು ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಶಶಿಭೂಷಣ್ ಹೆಗಡೆ ಕಣಕ್ಕೆ ಇಳಿದಿದ್ದರು. 2013ರ ಚುನಾವಣೆಯಲ್ಲಿ ಅಲ್ಪ ಮತದಲ್ಲಿ ಸೋತಿದ್ದ ಶಶಿಭೂಷಣ್, 2018ರಲ್ಲಿ ಮತ್ತೆ ಸೋಲನ್ನು ಕಂಡಿದ್ದರು. ಚುನಾವಣೆ ಸೋಲಿನ ನಂತರ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಲು ಹೆಚ್ಚಿನ ಆಸಕ್ತಿ ವಹಿಸಿರಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲೂ ಶಶಿಭೂಷಣ್ ಹೆಗಡೆಗೆ ಟಿಕೇಟ್ ಆಫರ್ ನೀಡಿದ್ದರು ಇದಕ್ಕೆ ಸಮ್ಮತಿ ನೀಡದ ಹಿನ್ನಲೆಯಲ್ಲಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕಣಕ್ಕೆ ಇಳಿದಿದ್ದರು. ಇನ್ನು ಕಳೆದ ಕೆಲ ದಿನಗಳಿಂದ ಶಶಿಭೂಷಣ್ ಹೆಗಡೆ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿ ಹರಡಿದ್ದು ಜೆಡಿಎಸ್ ನಿಂದ ಕಣಕ್ಕೆ ಇಳಿಯಲು ಶಶಿಭೂಷಣ್ ಹೆಗಡೆ ಸಹ ಮುಂದಾಗಿರಲಿಲ್ಲ.
ಸದ್ಯ ಶಿರಸಿ ಕ್ಷೇತ್ರದಿಂದ ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ. ಶಿರಸಿಯಲ್ಲಿ ತನ್ನ ಉಪೇಂದ್ರ ಪೈ ಸೇವಾ ಟ್ರಸ್ಟ್ ಮೂಲಕ ಹಲವು ವರ್ಷಗಳಿಂದ ಜನರಿಗೆ ಸೇವೆಯನ್ನ ಮಾಡುತ್ತಾ ಉಪೇಂದ್ರ ಪೈ ಗಮನ ಸೆಳೆದಿದ್ದಾರೆ. ಕ್ರೀಡೆಗಳಿಗೆ, ಆಟೋ ಚಾಲಕರಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉಪೇಂದ್ರ ಪೈ ಹೆಚ್ಚಿನ ಸಹಕಾರವನ್ನು ನೀಡುವ ಮೂಲಕ ಗಮನ ಸೆಳೆದಿದ್ದರು.
ಇನ್ನು ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟದ ನೇತೃತ್ವವನ್ನು ಸಹ ಉಪೇಂದ್ರ ಪೈ ವಹಿಸಿದ್ದು ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತವನ್ನು ಇಟ್ಟುಕೊಂಡಿದ್ದಾರೆ. ಇದರ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ ಜೊತೆ ಉಪೇಂದ್ರ ಪೈ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು ಉಪೇಂದ್ರ ಪೈ ಸಹ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ. ಹೊನ್ನಾವರಕ್ಕೆ ಪಂಚರತ್ನ ಯಾತ್ರೆ ಹಿನ್ನಲೆಯಲ್ಲಿ ಕುಮಾರಸ್ವಾಮಿ ಆಗಮಿಸಿದ್ದು ರಸ್ತೆ ಮಧ್ಯದಲ್ಲಿಯೇ ಕಾರನ್ನ ನಿಲ್ಲಿಸಿ ಉಪೇಂದ್ರ ಪೈ ಅವರನ್ನು ಕುಮಾರಸ್ವಾಮಿ ಕರೆಸಿದ್ದರು. ಇನ್ನು ಸುಮಾರು ಅರ್ಧ ಘಂಟೆಗಳ ಕಾಲ ಉಪೇಂದ್ರ ಪೈ ಜೊತೆ ಕುಮಾರಸ್ವಾಮಿ ಚರ್ಚಿಸಿದ್ದು ನಂತರ ಉಪೇಂದ್ರ ಪೈ ಕಾರಿನಿಂದ ಇಳಿದು ತೆರಳಿದ್ದರು.
ಇನ್ನು ಮಾದ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್ ಎರಡನೇ ಅಭ್ಯರ್ಥಿಗಳ ಪಟ್ಟಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದು ಶಿರಸಿ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ. ಶಿರಸಿ ಕ್ಷೇತ್ರದಲ್ಲೂ ಪಂಚರತ್ನ ರಥಯಾತ್ರೆಯ ಮೂಲಕ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ ಎಂದು ಪರೋಕ್ಷವಾಗಿ ಉಪೇಂದ್ರ ಪೈ ಸ್ಪರ್ಧೆ ಮಾಡುವ ವಿಚಾರವನ್ನು ತಿಳಿಸಿದ್ದಾರೆ.
ಉಪೇಂದ್ರ ಪೈ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದರೆ ಶಿರಸಿಯಲ್ಲಿ ತ್ರಿಕೋನ ಸ್ಪರ್ಧೆ ಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಶಿರಸಿಯಲ್ಲಿ ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹಲವು ಬಾರಿ ಶಾಸಕರಾಗಿದ್ದು ಆಡಳಿತ ವಿರೋಧಿ ಅಲೆ ಸಹ ಇದೆ. ಇನ್ನು ಕಾಂಗ್ರೆಸ್ ನಿಂದ ಭೀಮಣ್ಣ ನಾಯ್ಕ ಕಣಕ್ಕೆ ಇಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ. ಇದರ ನಡುವೆ ಉಪೇಂದ್ರ ಪೈ ಜೆಡಿಎಸ್ ನಿಂದ ಕಣಕ್ಕೆ ಇಳಿದರೆ ಮೂವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ ಎನ್ನಲಾಗಿದ್ದು, ಜನರು ಯಾರ ಪರ ಮತ ಚಲಾಯಿಸುತ್ತಾರೆ ಎನ್ನುವುದನ್ನ ಕಾದು ನೋಡಬೇಕಾಗಿದೆ.
***