ಕಾರವಾರ: ಅದಾನಿ ಸಮೂಹ ಸಂಸ್ಥೆಗಳಲ್ಲಿ ಎಲ್‌ಐಸಿ ಹೂಡಿರುವ ಬಂಡವಾಳ ಮತ್ತು ಎಸ್‌ಬಿಐ ಬ್ಯಾಂಕ್ ನೀಡಿರುವ ಸಾಲದ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ಅಥವಾ ಲೋಕಸಭಾ ಸದಸ್ಯರ ಜಂಟಿ ಸಮಿತಿಯಿಂದ ತನಿಖೆಯಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ.
ಇಲ್ಲಿನ ಎಲ್‌ಐಸಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಈ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ಅದಾನಿ ಗ್ರೂಪ್‌ನಲ್ಲಿ ಎಲ್‌ಐಸಿ ಭಾರಿ ಹೂಡಿಕೆ ಮಾಡಿದೆ. ಆದರೆ ಕಳೆದ ಕೆಲವು ದಿನಗಳಿಂದ ಕಂಪನಿ ನಷ್ಟ ಅನುಭವಿಸುತ್ತಿದೆ. ಇದರಿಂದ ಎಲ್‌ಐಸಿಯ 39 ಕೋಟಿ ಪಾಲಿಸಿದಾರರು ಮತ್ತು ಹೂಡಿಕೆದಾರರು 33,060 ಕೋಟಿ ರು. ಕಳೆದುಕೊಂಡಿದ್ದಾರೆ. ಎಸ್‌ಬಿಐ ಮತ್ತು ಇತರ ಭಾರತೀಯ ಬ್ಯಾಂಕ್‌ಗಳು ಅದಾನಿ ಗ್ರೂಪ್‌ಗೆ ಭಾರಿ ಮೊತ್ತದ ಸಾಲಗಳನ್ನು ನೀಡಿವೆ. ಅದಾನಿ ಗ್ರೂಪ್ ಭಾರತೀಯ ಬ್ಯಾಂಕ್‌ಗಳಿಗೆ 80,000 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಇಷ್ಟೆಲ್ಲ ಇರುವ ಕಂಪೆನಿಗೆ ಏಕೆ ಶೇರು ನೀಡಲು, ಸಾಲ ನೀಡಲು ಕೇಂದ್ರ ಸರಕಾರ ಒತ್ತಡ ಹೇರಿದೆ ಎಂದು ಪ್ರಶ್ನಿಸಿದರು.
ಈ ವೇಳೆ ಕಾರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ, ಹೊನ್ನಾವರ ಬ್ಲಾಕ್ ಅಧ್ಯಕ್ಷ ಜಗದೀಪ ತಂಗೇರಿ, ಜಿಪಂ ಮಾಜಿ ಸದಸ್ಯರುಗಳಾದ ಬಸವರಾಜ ದೊಡ್ಮನಿ, ರತ್ನಾಕರ ನಾಯ್ಕ, ಮುಖಂಡರಾದ ಕೆ.ಶಂಭು ಶೆಟ್ಟಿ ಮುಂತಾದವರು ಪ್ರತಿಭಟನೆಯಲ್ಲಿದ್ದರು.