ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಇದರ ಸಿಎಸ್ಆರ್ ಯೋಜನೆ ಮತ್ತು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ವಿಸ್ತರಣಾ ಕೇಂದ್ರದ ವತಿಯಿಂದ ತಾಲೂಕಿನ ತಾಟಗೇರಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಹೋಲಿಗೆ ತರಬೇತಿಯ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಳಿಯಾಳದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ್, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಮತ್ತು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯು ಸ್ಥಳೀಯ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ತರಬೇತಿ ಕಾರ್ಯಕ್ರಮ ಹಾಗೂ ತರಬೇತಿ ಮುಗಿದ ಬಳಿಕ ಉಚಿತ ಹೊಲಿಗೆ ಯಂತ್ರ ನೀಡುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾ ವಿಭಾಗದ ಅಧಿಕಾರಿ ಖಲೀಲ್ ಕುಲಕರ್ಣಿ ಮಾತನಾಡಿ, ಕಾಗದ ಕಾರ್ಖಾನೆಯ ಸಿ.ಎಸ್.ಆರ್ ಯೋಜನೆಯಡಿ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ಆಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮಣ ಜಾಧವ್, ಅಂಬೇವಾಡಿ ಗ್ರಾಮ ಪಂಚಾಯತಿ ಸದಸ್ಯ ಜಿ.ಇ.ಪ್ರಕಾಶ್ ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ್, ತರಬೇತಿಯ ಸಂಪನ್ಮೂಲ ವ್ಯಕ್ತಿ ಸುಹಾಸಿನಿ ಉಜಗಾವಕರ್ ದಾಂಡೇಲಿ, ದೇಶಪಾಂಡೆ ರ್ಸೆಟಿ ಸಂಸ್ಥೆಯ ದಾಂಡೇಲಿ ಶಾಖೆಯ ಯೋಜನಾಧಿಕಾರಿ ನಟರಾಜ ಅಂಗಡಿ ಹಾಗೂ ಸಂಸ್ಥೆಯ ಕ್ಷೇತ್ರ ಮೇಲ್ವಿಚಾರಕ ಅಂದಾನಪ್ಪ ಅಂಗಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತರಬೇತಿ ಪಡೆದ 25 ಶಿಬಿರಾರ್ಥಿಗಳಿಗೆ ಕಾಗದ ಕಾರ್ಖಾನೆಯಿಂದ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.