ಶಿರಸಿ: ರೈತ ಸದಸ್ಯರ ಸಹಕಾರಿ ಸಂಸ್ಥೆಯಾಗಿ ರಾಷ್ಟ್ರಮಟ್ಟದಲ್ಲಿ ತನ್ನ ಸಾಧನೆಯಿಂದ ಗುರುತಿಸಿಕೊಂಡಿರುವ ಪ್ರತಿಷ್ಠಿತ ಟಿ.ಎಸ್.ಎಸ್ ಸಂಸ್ಥೆಯಿಂದ ಶುಕ್ರವಾರ ನಗರದಲ್ಲಿ ಇಲೆಕ್ಟ್ರಿಕ್ ವೆಹಿಕಲ್ ಶೌರೂಮ್ ಮತ್ತು ಮಣ್ಣು ಪರೀಕ್ಷಾ ಕೇಂದ್ರ ಉದ್ಘಾಟನೆಗೊಂಡಿತು.
ಇಲೆಕ್ಟ್ರಿಕ್ ಶೌರೂಮ್ ಮತ್ತು ಮಣ್ಣು ಪರೀಕ್ಷಾ ಕೇಂದ್ರದ ಉದ್ಘಾಟನೆಯನ್ನು ಖ್ಯಾತ ಉದ್ಯಮಿ, ಆದಿಶಕ್ತಿ ಹೊಂಡಾ ಮುಖ್ಯಸ್ಥ ಶ್ರೀಕಾಂತ ಹೆಗಡೆ ನೆರವೇರಿಸಿ, ಶುಭಕೋರಿದರು. ಇದೇ ವೇಳೆ ಈರ್ವರು ಗ್ರಾಹಕರಿಗೆ ನೂತನ ಇಲೆಕ್ಟ್ರಿಕ್ ಬೈಕ್ ಹಸ್ತಾಂತರಿಸಲಾಯಿತು. ಬೈಕ್ ಖರೀದಿಸಿದ ಗ್ರಾಹಕರಿಗೆ ವಿಶೇಷ ಉಡುಗೊರೆಯಾಗಿ 10 ಗ್ರಾಂ ಬೆಳ್ಳಿ ನಾಣ್ಯ ನೀಡಲಾಯಿತು. ಕಾರ್ಯಕ್ರಮದಲ್ಲಿ ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಟಿಎಸ್ಎಸ್ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ಯುವ ಧುರೀಣ ದೀಪಕ್ ದೊಡ್ಡೂರು, ನಿರ್ದೇಶಕರಾದ ಶಶಾಂಕ ಹೆಗಡೆ ಶೀಗೆಹಳ್ಳಿ, ಸಿ.ಎನ್.ಹೆಗಡೆ, ಸಂಸ್ಥೆಯ ಎಜಿಎಮ್ ಗಳಾದ ವಿಜಯಾನಂದ ಭಟ್ಟ, ವಿನಾಯಕ ಹೆಗಡೆ, ಕೃಷಿ ತಜ್ಞರಾದ ವಿ.ಎಂ.ಹೆಗಡೆ ಶಿಂಗನಮನೆ, ಕಿಶೋರ್ ಹೆಗಡೆ ಸೇರಿದಂತೆ ಇನ್ನಿತರರು ಇದ್ದರು.
ಈ ವೇಳೆ ಸಂಸ್ಥೆಯ ಕೃಷಿ ತಜ್ಞ ಶ್ರೀಕಾಂತ ಹೆಗಡೆ ಮಾತನಾಡಿ, ಮಣ್ಣಿನ ಪೋಷಕಾಂಷ ವಿವಿಧ ಹಂತದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಬದಲಾವಣೆಯಾಗುತ್ತದೆ. ರೈತರಿಗೆ ಮಣ್ಣಿನ ಅವಶ್ಯಕತೆ ತಿಳಿದರೆ ಮಾತ್ರ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ.
ಮಣ್ಣಿನಲ್ಲಿರುವ ಪೋಷಕಾಂಶಗಳ ಲಭ್ಯತೆ ಅಥವಾ ಪೂರೈಕೆಯ ಸೂಚ್ಯಂಕವನ್ನು ಒದಗಿಸಲು, ಆಮ್ಲೀಯತೆ, ಲವಣಾಂಶ ಮತ್ತು ಕ್ಷಾರತೆ ಸಮಸ್ಯೆಗಳ ನಿವಾರಣೆಗೆ ಮಣ್ಣಿನಲ್ಲಿರುವ ಪೋಷಕಾಂಶಗಳ ಸ್ಥಿತಿಗಳನ್ನು ಮೌಲ್ಯಮಾಪನ ಮಾಡಲು ಮತ್ತು ಬೆಳೆಗಳಿಗೆ ಅನುಗುಣವಾಗಿ ಗೊಬ್ಬರ ಮತ್ತು ಗೊಬ್ಬರದ ಪ್ರಮಾಣವನ್ನು ಶಿಫಾರಸ್ಸು ಮಾಡಲು ಮಣ್ಣಿನ ಪರೀಕ್ಷೆ ಬಹಳ ಅಗತ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ ರೈತರ ಹಿತಕಾಯಲು ಸಂಸ್ಥೆಯು ಸದಾ ಬದ್ಧವಿದೆ ಎಂದರು. ಇಲೆಕ್ಟ್ರಿಕ್ ವೆಹಿಕಲ್ ಕುರಿತಾಗಿ ಸಂಸ್ಥೆಯ ಅಭಯ ಭಟ್ಟ ಮಾಹಿತಿ ನೀಡಿ, ಗ್ರಾಹಕ ಸ್ನೇಹಿಯಾಗಿ ಟಿಎಸ್ಎಸ್ ಈ.ವಿ. ಕೆಲಸ ನಿರ್ವಹಿಸಲಿದೆ ಎಂದರು.