ಶಿರಸಿ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ರಾಜ್ಯದ ಪ್ರಸಿದ್ದ ಕವಿ, ಪತ್ರಕರ್ತರಾಗಿ, ಮುಖ್ಯ ಶಿಕ್ಷಕರಾಗಿ ಸೇವಾ ನಿವೃತ್ತರಾದ ರಾಜೀವ ಅಜ್ಜೀಬಳ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಈ ವಿಷಯ ಪ್ರಕಟಿಸಿದ ತಾಲೂಕು ಕಸಾಪ ಅಧ್ಯಕ್ಷ ಜಿ.ಸುಬ್ರಾಯ ಭಟ್ಟ ಬಕ್ಕಳ ಮಾಹಿತಿ ನೀಡಿ, ತಾಲೂಕಿನ ಅಜ್ಜೀಬಳದ ರಾಮಚಂದ್ರ ಜಿ.ಹೆಗಡೆ ಅವರು ರಾಜೀವ ಅಜ್ಜೀಬಳ ಎಂದೇ ಪ್ರಸಿದ್ಧರು. ಆರು ಕವನ ಸಂಕಲನ, ಒಂದು ಆಂಗ್ಲ ಭಾಷಾ ಕೃತಿ, ನೀಳ್ಗತೆಗಳ ಎರಡು ಸಂಕಲನ, ಐದು ಸಂಪಾದನೆಗಳು, ಒಂದು ಕಥಾ ಸಂಕಲನ ಪ್ರಕಟವಾಗಿದೆ. ಇನ್ನೂ ಮೂರು ಕೃತಿಗಳು ಪ್ರಕಟಣೆಗೆ ಸಿದ್ದವಾಗಿದೆ. ಡೆಕ್ಕನ್ ಹೆರಾಲ್ಡ್, ದಿ ಹಿಂದೂದ ವರದಿಗಾರರಾಗಿ ಕೂಡ ಕರ್ತವ್ಯ ನಿರ್ವಹಿಸಿದ್ದಾರೆ. ಸೌಮ್ಯ ಸ್ವಭಾವ, ಕವಿ ಹೃದಯದ ಆರ್.ಜಿ.ಹೆಗಡೆ ಅವರು ಉಪಾಯನ, ಮಂಗಳಾ ವರ್ಗೀಸ್, ಸಿಂಚನಶ್ರೀ, ತಾಲೂಕು ಪತ್ರಕರ್ತ ಸಂಘದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಾಲೂಕು ಕಸಾಪ ಅಧ್ಯಕ್ಷರಾಗಿ, ಕವಿ ಕಾವ್ಯ ಬಳಗ, ಬಣ್ಣ ಬೆಳಕು, ತಾಲೂಕು ಪತ್ರಕರ್ತರ ಸಂಘಗಳಲ್ಲೂ ಕೆಲಸ ಮಾಡಿದ್ದಾರೆ. ಫೆಬ್ರುವರಿ 19ರಂದು ಶಿರಸಿಯ ಅಂಬೇಡ್ಕರ ಭವನದಲ್ಲಿ ಶಿರಸಿ ತಾಲೂಕಾ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.