ಯಲ್ಲಾಪುರ: ಸಂಗೀತ, ಸಾಹಿತ್ಯ, ನಾಟಕ, ಕಲೆಗಳು ಮನುಷ್ಯನನ್ನು ಸಂಸ್ಕಾರವಂತನನ್ನಾಗಿ ಪರಿವರ್ತಿಸುತ್ತವೆ. ಸಂಗೀತ ಮನುಷ್ಯನ ಶ್ರೇಷ್ಠತೆಯನ್ನು ಬೆಳಗುತ್ತಿದ್ದರೆ, ಸಾಹಿತ್ಯಾಧ್ಯಯನ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಮಲೆನಾಡು ಕೃಷಿ ಗ್ರಾಮಿಣಾಭಿವೃದ್ಧಿ ಸಹಕಾರಿ ಸಂಸ್ಥೆಯ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.
ಅವರು ವಿಶ್ವದರ್ಶನದ ಗಂಗಾಧರೇಂದ್ರ ಸರಸ್ವತೀ ಸಭಾಂಗಣದಲ್ಲಿ ದಾಂಡೇಲಿಯ ಮಾಸ್ಕೇರಿ ಸಾಹಿತ್ಯಾರಾಧನ ವೇದಿಕೆ ಮತ್ತು ಮಂತ್ರಾಲಯದ ಪೂಜ್ಯ ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಘೋಷಿಸಿ ಪೂಜ್ಯ ಶ್ರೀ ವಿಭೂದೇಂದ್ರ ತೀರ್ಥರ ಅಮೃತ ಹಸ್ತದಿಂದ ನೀಡಲಾದ ಶ್ರೀ ಶ್ರೀಗಂಧ ಹಾರ ಪ್ರಶಸ್ತಿ ಮತ್ತು ಶ್ರೀಗುರು ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಿವೃತ್ತ ತಹಶೀಲ್ದಾರ ಡಿ.ಜಿ.ಹೆಗಡೆ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವವರನ್ನು ಗುರುತಿಸಿ ಗೌರವಿಸುವುದು ಯುವ ಜನಾಂಗಕ್ಕೆ ಪ್ರೇರಣೆಯಾಗಲು ಸಾಧ್ಯ ಎಂದರು.
ಮಾಸ್ಕೇರಿ ಸಾಹಿತ್ಯಾರಾಧನ ಪ್ರತಿಷ್ಟಾನದ ಅಧ್ಯಕ್ಷ ಮಾಸ್ಕೇರಿ ಎಂ.ಕೆ.ನಾಯಕ ಮಾತನಾಡಿ, ಪ್ರಶಸ್ತಿಯನ್ನು ಮಂತ್ರಾಲಯದಲ್ಲೇ ನೀಡಬೇಕಿತ್ತು. ದೂರದ ಊರಿಗೆ ಹೋಗಲಾಗದ ಪ್ರಯುಕ್ತ ಯಲ್ಲಾಪುರದಲ್ಲೇ ಪ್ರಶಸ್ತಿ ನೀಡಿದ್ದೆವೆ. ನಾವು ಹಲವಾರು ವರ್ಷಗಳಿಂದ ಈ ಪ್ರಶಸ್ತಿಯನ್ನು ನಾಡಿನ ಶ್ರೇಷ್ಟ ಸಾಧಕರಿಗೆ ನೀಡುತ್ತಿದ್ದೆವೆ. ಈ ವರ್ಷವೂ ಶ್ರೀಗುರು ಪ್ರಶಸ್ತಿಯನ್ನು ಒಂಬತ್ತು ಸಾಧಕರಿಗೆ ನೀಡಿದ ಸಮಾಧಾನವಿದೆ ಎಂದರು.
ವಿಶ್ರಾಂತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿ, ಶ್ರೀಗುರು ಪ್ರಶಸ್ತಿ ಪುರಸ್ಕೃತರಾದ ವನರಾಗ ಶರ್ಮಾ ಗಣಪತಿ ಕಂಚಿಪಾಲ್, ಡಾ.ಡಿ.ಕೆ.ಗಾಂವ್ಕರ್, ಮುಕ್ತಾ ಶಂಕರ, ಶಿವಲೀಲಾ ಹುಣಸಗಿ, ಕವಿತಾ ಹೆಬ್ಬಾರ, ವಿಶ್ವನಾಥ ಭಾಗ್ವತ, ಪ್ರವೀಣ ನಾಯಕ, ಸುಧಾಕರ ನಾಯಕ, ಉಮೇಶ ಮಂಡಳಿ ಇವರುಗಳು ಕೂಡಾ ತಮ್ಮ ಕ್ಷೇತ್ರದ ಜೊತೆ ವಿವಿಧ ಕ್ಷೇತ್ರಗಳಲ್ಲಿಯೂ ಸಾಧನೆಮಾಡಿ ಗುರುತಿಸಿಕೊಂಡಿದ್ದಾರೆ ಎಂದರು.
ಸನ್ಮಾನಿತರ ಪರವಾಗಿ ಶ್ರೀಗಂಧಹಾರ ಪ್ರಶಸ್ತಿ ಪುರಸ್ಕೃತ ವನರಾಗ ಶರ್ಮಾ ಮಾತನಾಡಿ, ಮಾಸ್ಕೇರಿ ಸಂಸ್ಥೆ ನೀಡಿದ ಸನ್ಮಾನ ಪ್ರಶಸ್ತಿ ಸನ್ಮಾನ ಇದು ಸಾಹಿತ್ಯ ಕ್ಷೇತ್ರಕ್ಕೆ ಸಂದ ಗೌರವ ಎಂದು ಹೇಳಿದರು. ಶ್ರೀಗುರು ಪ್ರಶಸ್ತಿ ಪುರಸ್ಕೃತರಾದ ಡಾ.ಡಿ.ಕೆ.ಗಾಂವ್ಕರ್, ಪ್ರವೀಣ ನಾಯಕ ತಮ್ಮ ಅಭಿಪ್ರಾಯ ಹಂಚಿಕೊಂಡರು. ಈ ಸಂದರ್ಭದಲ್ಲಿ ದಾಂಡೇಲಿಯ ಯುವ ಕೊಳಲು ವಾದಕ ಜಯತ್ ಅಭಿನಂದಿಸಲ್ಪಟ್ಟರು. ಶಿಕ್ಷಕಿ ಪಲ್ಲವಿ ಕೋಮಾರ ಸಂಗಡಿಗರಿಂದ ಪ್ರಾರ್ಥಿಸಿದರು. ವಿಶ್ವದರ್ಶನ ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್ಟ ಪ್ರಾರ್ಥಿಸಿದರು. ಪತ್ರಕರ್ತರಾದ ಕೇಬಲ್ ನಾಗೇಶ ನಿರ್ವಹಿಸಿದರು. ಶಂಕರ ಭಟ್ಟ ತಾರೀಮಕ್ಕಿ ವಂದಿಸಿದರು.