ಕುಮಟಾ: ತಾಲೂಕಿನ ಹಂದಿಗೋಣದಲ್ಲಿ ಬೈಪಾಸ್ ನಿರ್ಮಿಸುವ ಸಂಬಂಧ ಪೊಲೀಸ್ ಸರ್ಪಗಾವಲಿನಲ್ಲಿ ಸರ್ವೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಂದಾಗುತ್ತಿದ್ದಂತೆ ಸ್ಥಳೀಯರು ಪ್ರತಿರೋಧ ವ್ಯಕ್ತಪಡಿಸಿ, ಹಠಾತ್ ಪ್ರತಿಭಟನೆ ನಡೆಸಿದರು.
ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಹಾದುಹೋಗಬೇಕಿದ್ದ ಚತುಷ್ಪಥದ ಅಗಲವನ್ನು ಮೊಟಕುಗೊಳಿಸಿ ಬೈಪಾಸ್ ಮಾಡಲು ಪಟ್ಟಣದ ಹೊರವಲಯದಲ್ಲಿ ಸರ್ವೆಗೆ ಮುಂದಾಗಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಗೆ ಈ ಹಿಂದೆಯೇ ಭಾರಿ ವಿರೋಧ ವ್ಯಕ್ತವಾಗಿ ಅನೇಕ ಹೋರಾಟಗಳ ಬಳಿಕ ಕೆಲ ವರ್ಷ ಯೋಜನೆಯನ್ನು ತಟಸ್ಥಗೊಳಿಸಲಾಗಿತ್ತು. ಆದರೆ ಈಗ ಮತ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬೈಪಾಸ್ ಮಾಡಲು ಸರ್ವೆ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ್ ಅವರ ಸಹಕಾರದಲ್ಲಿ ಪೊಲೀಸ್ ಇಲಾಖೆಯ ಸರ್ಪಗಾವಲಿನಲ್ಲಿ ಕಲಭಾಗ ಗ್ರಾ.ಪಂ ವ್ಯಾಪ್ತಿಯ ಹಂದಿಗೋಣದಲ್ಲಿ ಬೈಪಾಸ್ ನಿರ್ಮಾಣದ ಸರ್ವೆ ಕಾರ್ಯವನ್ನು ಅಧಿಕಾರಿಗಳು ಆರಂಭಿಸಿದ್ದರು.
ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಸ್ಥಳೀಯರು ಶಾಸಕ ದಿನಕರ ಶೆಟ್ಟಿ ಅವರನ್ನು ಕರೆಯಿಸಿ, ಹಠಾತ್ ಪ್ರತಿಭಟನೆ ನಡೆಸಿದರು. ಆ ಸಂದರ್ಭದಲ್ಲಿ ಶಾಸಕರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಮತ್ತು ಐ.ಅರ್.ಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೈಪಾಸ್ ನಿರ್ಮಾಣಕ್ಕೆ ಏಕಾಏಕಿ ಸರ್ವೆ ಕಾರ್ಯ ಆರಂಭಿಸಿರುವುದು ಸರಿಯಲ್ಲ. ಈ ಭಾಗದಲ್ಲಿ ಹಿಂದುಳಿದ ವರ್ಷದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಸ್ಥಳೀಯ ಜನರ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಆರಂಭಿಸಬೇಕು. ಅವೈಜ್ಞಾನಿಕ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತ ನಡೆದು ಸಾವು-ನೋವು ಸಂಭವಿಸುತ್ತಿದೆ. ಕೂಡಲೇ ಸರ್ವೆ ಕಾರ್ಯ ಸ್ಥಗಿತಗೊಳಿಸಬೇಕು ಎಂದು ಸೂಚಿಸಿದರು.
ಬೈಪಾಸ್ ನಿರ್ಮಾಣದಿಂದ ಸಾಕಷ್ಟು ಮನೆ ಮತ್ತು ಜಮೀನುಗಳಿಗೆ ತೊಂದರೆಯಾಗುತ್ತದೆ. ಸಾಮೂಹಿಕ ಜಮೀನು ಹೆಚ್ಚಿದ್ದು, ಇದರಿಂದ ಪರಿಹಾರ ಪಡೆಯಲು ತೊಂದರೆ ಎದುರಿಸಬೇಕಾಗುತ್ತದೆ. ದೀವಗಿ ಮತ್ತು ಹೊನ್ನಾವರದಲ್ಲಿ ಮೇಲ್ಸೆತುವೆ ಅತ್ಯವಶ್ಯವಾಗಿದ್ದು, ಅಲ್ಲಿ ಮೊದಲು ಕಾಮಗಾರಿ ನಡೆಸಿ, ಈಗಿರುವ ರಸ್ತೆಯನ್ನು ಚತುಷ್ಪಥ ಹೆದ್ದಾರಿ ನಿರ್ಮಾಣ ಮಾಡಿ, ಅನುಕೂಲ ಕಲ್ಪಿಸಿ ಎಂದು ಉಪವಿಭಾಗಾಧಿಕಾರಿಗೆ ಸೂಚಿಸಿದ ಅವರು, ಸದ್ಯದಲ್ಲಿ ಯಾವುದೇ ಕಾರಣಕ್ಕೂ ಬೈಪಾಸ್ ನಿರ್ಮಾಣಕ್ಕೆ ಕ್ಷೇತ್ರದ ಶಾಸಕನಾಗಿ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಕುಮಟಾ ತಾಲೂಕಿನ ಹಂದಿಗೋಣ, ಬಗ್ಗೋಣ, ಕಲಭಾಗ, ಹೆರವಟ್ಟಾ, ಮಣಕಿ ಭಾಗದಲ್ಲಿ ಸಾಕಷ್ಟು ಮನೆಗಳಿವೆ. ನೂರಾರು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸವಿದ್ದು, ಜೀವನ ಕಟ್ಟುಕೊಂಡಿದ್ದೇವೆ. ಬೈಪಾಸ್ ಹೆಸರಿನಲ್ಲಿ ನಮ್ಮನ್ನು ಒಕ್ಕಲೆಬ್ಬಿಸಿದರೆ ಮುಂದೆ ನಡೆಯುವ ಅನಾಹುತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಹೊಣೆಯಾಗುತ್ತದೆ. ಇಲ್ಲಿನ ಜನರಿಗೆ ತಿಳಿಸದೇ ಪೊಲೀಸ್ ಭದ್ರತೆಯಲ್ಲಿ ಸರ್ವೆ ಕಾರ್ಯ ಆರಂಭಿಸಿದ್ದಾರೆ. ಹೊನ್ಮಾವ್ ಮತ್ತು ರೈಲ್ವೇ ಬ್ರಿಡ್ಜ್ ಅಗಲೀಕರಣಗೊಳಿಸಿ, ಅಲ್ಲಿಯೇ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಬೇಕು. ಸಾರ್ವಜನಿಕರ ವಿರೋಧದ ನಡುವೆಯೂ ಸರ್ವೆ ಕಾರ್ಯ ನಡೆಸಿದರೆ ಅದರ ಪರಿಣಾಮ ಅಧಿಕಾರಿಗಳು ಎದುರಿಸಬೇಕು ಎಂದು ಕಲಭಾಗ ಗ್ರಾ.ಪಂ ಅಧ್ಯಕ್ಷೆ ಗೀತಾ ಕುಬಾಲ, ಉಪಾಧ್ಯಕ್ಷ ಮಂಜುನಾಥ ನಾಯ್ಕ, ಸದಸ್ಯರಾದ ಗೌರಿಶ ಕುಬಾಲ ಸೇರಿದಂತೆ ಸ್ಥಳೀಯರು ಎಚ್ಚರಿಕೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ, ನಮಗೆ ಸರ್ಕಾರದಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಸರ್ವೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಅಲ್ಲದೆ ಇದೊಂದು ಪ್ರಾಥಮಿಕ ಸರ್ವೆ ಅಷ್ಟೆ. ಸರ್ವೆ ನಡೆಸಿದ ಬಳಿಕ ಇದರ ಸಾಧಕ, ಬಾಧಕಗಳನ್ನು ಚರ್ಚಿಸಲು ಸಾಧ್ಯವಾಗುತ್ತದೆ. ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದೇ ಸರ್ವೆ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಮಂಜುಳಾ ಮುಕ್ರಿ, ದೇವಗಿರಿ ಗ್ರಾ.ಪಂ ಉಪಾಧ್ಯಕ್ಷ ಎಸ್.ಟಿ.ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಪಾಂಡುರಂಗ ಪಟಗಾರ, ಗಣೇಶ ಮುಕ್ರಿ, ನಾರಾಯಣ ಮುಕ್ರಿ, ಮಸ್ತಿ ಮುಕ್ರಿ, ರಮೇಶ, ಮಂಜುನಾಥ ಪಟಗಾರ, ಪರಮೇಶ್ವರ ಪಟಗಾರ ಸೇರಿದಂತೆ ನೂರಾರು ಜನರು ಇದ್ದರು.