ದಾಂಡೇಲಿ: ನಗರದ ಕಾಳಿ ನದಿಯಲ್ಲಿ ಮೊಸಳೆಗಳಿಂದ ಈಗಾಗಲೆ ಕಳೆದೆರಡು ವರ್ಷಗಳಲ್ಲಿ ನಾಲ್ಕೈದು ಜೀವ ಬಲಿಯಾಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಮತ್ತಷ್ಟು ಜೀವ ಬಲಿಯಾಗಬಾರದೆಂದು ಅರಣ್ಯ ಇಲಾಖೆ, ತಾಲೂಕಾಡಳಿತ, ನಗರಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ನಗರದ ಜನತೆ ಮಾತ್ರ ಇದ್ಯಾವುದು ತಮಗೆ ಸಂಬoಧವೆ ಇಲ್ಲ ಎಂಬoತೆ ವರ್ತಿಸುತ್ತಿರುವುದು ಕಂಡು ಬರತೊಡಗಿದೆ.
ಅರಣ್ಯ ಇಲಾಖೆ ಕಾಳಿ ನದಿ ತೀರದ ಅಲ್ಲಲ್ಲಿ ಮೊಸಳೆಯಿದೆ ಎಚ್ಚರಿಕೆ ಎನ್ನುವ ನಾಮಫಲಕವನ್ನು ಆಳವಡಿಸಿದೆ. ಇದರ ಜೊತೆಗೆ ಅರಣ್ಯ ಇಲಾಖೆಯಿಂದ ಬೈಲುಪಾರು, ಕುಳಗಿ ಸೇತುವೆಯ ಹತ್ತಿರವು ಸಿಸಿ ಕ್ಯಾಮೇರಾ ಹಾಗೂ ಧ್ವನಿವರ್ಧಕವನ್ನು ಅಳವಡಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ನಗರದ ಕುಳಗಿ ರಸ್ತೆಯಲ್ಲಿ ಕೆಲವರು ಇನ್ನೂ ನದಿಗಿಳಿದು ನದಿಯ ಮಧ್ಯಕ್ಕೆ ಹೋಗಿ ಸ್ನಾನ ಮಾಡುತ್ತಿರುವುದು ಕಂಡುಬoದಿದೆ. ನದಿಯ ಮಧ್ಯಕ್ಕೆ ಹೋಗಿ ಸ್ನಾನ ಮಾಡುತ್ತಿರುವ ಮಾಹಿತಿಯನ್ನು ಪಡೆದ ವಲಯಾರಣ್ಯಾಧಿಕಾರಿ ಅಪ್ಪರಾವ್ ಕಲಶೆಟ್ಟಿಯವರು ಕೂಡಲೆ ನದಿಯ ಹತ್ತಿರ ಬಂದು ನದಿಗಿಳಿದವರನ್ನು ವಿಚಾರಿಸಿ, ಬುದ್ಧಿ ಮಾತು ಹೇಳಿ ಎಚ್ಚರಿಕೆಯನ್ನು ನೀಡಿ ಕಳುಹಿಸಿಕೊಟ್ಟಿದ್ದಾರೆ.