ಶಿರಸಿ: ಶ್ರೀಸಿದ್ದರಾಮೇಶ್ವರವರ 850ನೇ ಜಯಂತಿ ಕಾರ್ಯಕ್ರಮವನ್ನು ಇಲ್ಲಿಯ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ, ಭೋವಿ ಸಮಾಜ ಹಾಗೂ ವಿವಿಧ ಸಂಘಟನೆಗಳಿoದ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳಿಸಿದ ಕಡುಬಡ ಕುಟುಂಬದ ಮಹಾಲಕ್ಷ್ಮಿ ಭೋವಿವಡ್ಡರ್ ಕುಪ್ಪಗಡ್ಡೆ ಹಾಗೂ ರಾಜ್ಯಮಟ್ಟದ ಚಕ್ರ ಎಸೆತ ಸ್ಪರ್ಧೆಗೆ ಆಯ್ಕೆಯಾದ ಬದನಗೋಡ ಗ್ರಾಮದ ಹೇಮಾ ಭೋವಿವಡ್ಡರ್, ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಆಯ್ಕೆಯಾದ ವಿನಾಯಕ್ ವದ್ದಲ ಅವರಿಗೆ ಸನ್ನಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸಿದ್ದರಾಮೇಶ್ವರರು ದಾರ್ಶನಿಕ ವ್ಯಕ್ತಿಯಾಗಿದ್ದು, ಸಮಾನತೆಗಾಗಿ ಹೋರಾಡಿದವರು. ಅವರು ನಡೆದುಬಂದ ದಾರಿ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಮಕ್ಕಳು ಕೇವಲ ಅಂಕಗಳಿಕೆ ಶಿಕ್ಷಣಕ್ಕೆ ಒತ್ತುಕೊಡದೇ ಸಂಸ್ಕಾರಯುತ ಶಿಕ್ಷಣಕ್ಕೂ ಒತ್ತು ನೀಡಬೇಕು. ಸಿದ್ದರಾಮೇಶ್ವರರು ಕೂಡಾ ಇದೇ ತತ್ವವನ್ನು ಹೇಳಿದ್ದರು ಎಂದರು.
ಉಪತಹಶೀಲ್ದಾರ್ ರಮೇಶ ಹೆಗಡೆ, ಸಮಾಜ ಕಲ್ಯಾಣ ಇಲಾಖೆಯ ಕಿರಣ್ ನಾಯ್ಕ, ಭೋವಿ ಸಮಾಜದ ಮುಖಂಡರೂ ಹಾಗೂ ಎಸ್ಸಿ, ಎಸ್ಟಿ ದೌರ್ಜನ್ಯ ಸಮಿತಿಯ ನಾಮನಿರ್ದೇಶಿತ ಸದಸ್ಯ ಶಿವಾನಂದ, ಬದನಗೋಡ ಗ್ರಾಮ ಪಂಚಾಯತ್ ಸದಸ್ಯ ಮಾರುತಿ ಮಟ್ಟೇರ್, ಗ್ರಾಮ ಪಂಚಾಯತ್ ಸದಸ್ಯೆ ಗೀತಾ ಭೋವಿ, ಉಪನ್ಯಾಸಕ ಹನುಮಂತಪ್ಪ ಸಾಲಿ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಮಾರುತಿ ಅಲಕುಂಟೆ ಹಾಗೂ ತಾಲೂಕಿನ ಭೋವಿ ಸಮಾಜದ ಮುಖಂಡರು, ಮಹಿಳಾ ಸದಸ್ಯರು ಕಾರ್ಯಕ್ರಮದಲ್ಲಿದ್ದರು.